ಬಹಳ ಕಾಲದ ನಂತರ ಯಂಡಮೂರಿಯವರ ಪುಸ್ತಕ ಓದೋಣ ಅನಿಸಿತು. ಇದು ಯಂಡಮೂರಿಯವರು 1974ರಲ್ಲಿ ಬರೆಯಲು ಶುರು ಮಾಡಿ, ಮುಗಿಸಲು ಏಳು ವರ್ಷಗಳು ಬೇಕಾದವಂತೆ. ಅವರು ಏಕಕಾಲದಲ್ಲಿ ಅನೇಕ ಪುಸ್ತಕ, ಲೇಖನಗಳನ್ನು ಬರೆಯುವ ಲೇಖಕರು, ಈ ಕಾರಣದಿಂದ ಇಷ್ಟು ಸಮಯ ತಗೊಂಡರೆನೋ?
ಚಿರಂಜೀವಿ ಎಂಬ ಯುವಕನ ತಂದೆಗೆ ಮರಣದಂಡನೆಯ ಶಿಕ್ಷೆಯಾದ ನಂತರ ಅವನಿಗೆ ತನ್ನ ತಂದೆ ನಿರಪರಾಧಿ ಎಂದು ಗೊತ್ತಾಗುತ್ತದೆ, ಆದರೆ ಪರಿಸ್ಥಿತಿ ಮಿತಿಮೀರಿದ್ದರಿಂದ ಮರಣದಂಡನೆಯ ಐ.ಪಿ.ಸಿ ಸೆಕ್ಷನ್ 302 ನ್ನು ನಮ್ಮ ದೇಶವೂ ಇತರ ದೇಶಗಳಂತೆ ರದ್ದು ಮಾಡಿದ್ದರೆ ತಂದೆಯವರ ಪ್ರಾಣವನ್ನು ಉಳಿಸಬಹುದಿತ್ತು ಎಂಬ ಭಾವನೆ. ಮರಣದಂಡನೆಯನ್ನು ರದ್ದು ಮಾಡುವಂತೆ ಸರ್ಕಾರವನ್ನು ಪ್ರೇರೇಪಿಸಲು, ಇದೇ ರೀತಿಯ ಮನೋಭಾವ ಇದ್ದ ಸರ್ವೋತ್ತಮ ರಾವ್ ಎಂಬ ವಕೀಲರ ಜೊತೆ ಸೇರಿ ಒಂದು ಅದ್ಭುತವಾದ ನಾಟಕ ತಯಾರಿಸುತ್ತಾನೆ. ಆದರೆ ನಾಟಕದ ಮಧ್ಯೆ ತಾನೇ ಸಿಲುಕಿ ಜೀವನ-ಮೃತ್ಯು ಜೊತೆ ಸೆಣಸಾಡುತ್ತಾನೆ. ಕೊನೆಗೆ ಸಫಲನಾಗುತ್ತಾನೋ ಅಥವಾ ತಾನೇ ಗಲ್ಲಿಗೇರುತ್ತಾನೋ? ನೀವೇ ಓದಿ ತಿಳಿದುಕೊಳ್ಳಿ.
ಯಂಡಮೂರಿಯವರ ಕಾದಂಬರಿ ಎಂದರೆ ಒಂದು ಅಪೇಕ್ಷೆಯಿಟ್ಟು ಓದುತ್ತೇವೆ, ಈ ಕಾದಂಬರಿ ಅಂತಹ ಅಪೇಕ್ಷೆಯನ್ನು ಖಂಡಿತವಾಗಿ ಈಡೇರಿಸುತ್ತದೆ. ಮತ್ತು ಅವರ ಕಾದಂಬರಿಯಲ್ಲಿ ಒಂದೆರಡು ಹೊಸ ವಿಷಯಗಳು ಇದ್ದೇ ಇರುತ್ತವೆ. ಸಿನಿಮೀಯವಾಗಿ ವರ್ಣಿಸುವ ಇದು ಚಿತ್ರ ಕಥಾವಸ್ತುವೇ ಆಗಿದೆ. ಚಿರಂಜೀವಿ, ಅರ್ಚನಾ, ಸರ್ವೋತ್ತಮ ರಾವ್, ಶರ್ಮಾ, ದಾರಾಸಿಂಗ್, ಓಬಳೇಶ ಇತ್ಯಾದಿ ಪಾತ್ರಗಳ ಹೆಸರು ನನಗೆ ಕಾದಂಬರಿ ಓದಿ ಎರಡು ವಾರದ ನಂತರವೂ ನಾಲಿಗೆಯ ತುದಿಯಲ್ಲಿದೆ, ಅಂದರೆ ಆ ಪಾತ್ರಗಳ ಪೋಷಣೆ ಚೆನ್ನಾಗಿದೆ ಎಂಬ ಸೂಚ್ಯಾಂಕ. ಹಳೆಯ ಪುಸ್ತಕವಾದ್ದರಿಂದ ನಿಮ್ಮಲ್ಲಿ ಅನೇಕರು ಓದಿ, ವಿಮರ್ಶೆ ಕೂಡಾ ಬರೆದಿರಬಹುದು. ಓದಿಲ್ಲದಿದ್ದರೆ ಪರಿಗಣಿಸಬಹುದಾದ ಪುಸ್ತಕ.