ಹದಿನಂಟು (ಏನಿಲ್ಲ ಏನುಂಟು)

Posted on: 12 May 2019

Category: Book Review

Blog Views: 1849

Image result for ಹದಿನಂಟು

 

ಪುಸ್ತಕ: ಹದಿನಂಟು (ಏನಿಲ್ಲ.. ಏನುಂಟು ..!?)

ಲೇಖಕರು: ಡಾ. ಪಿ.ವಿ. ಭಂಡಾರಿ, ಹರೀಶ್ ಶೆಟ್ಟಿ ಬಂಡ್ಸಾಲೆ

ಪ್ರಕಾಶಕರು: ಸಾವಣ್ಣ ಎಂಟರ್ಪ್ರೈಸಸ್

 

ಎರಡು ತಿಂಗಳ ಹಿಂದೆಯೇ ಈ ಪುಸ್ತಕ ನನ್ನಲ್ಲಿತ್ತು. ಸಮಯಾಭಾವ ಮತ್ತು ಇದು ಕಥೆ-ಕಾದಂಬರಿಯಲ್ಲ ಎಂಬ ಕಾರಣಕ್ಕೆ ಇದನ್ನು ಓದಲು ಎತ್ತಿರಲಿಲ್ಲ. ಓದಿದ ಮೇಲೆ ಇದನ್ನು ಎರಡು ತಿಂಗಳ ಮುಂಚೆ ಅಲ್ಲ, ಸಿಕ್ಕಿದ್ದರೆ ಬಹಳ ವರ್ಷಗಳ ಹಿಂದೆಯೇ ಓದ ಬೇಕಿತ್ತು ಎಂಬ ಭಾವನೆ ಮೂಡಿದೆ.

ಇದು ಒಂದು ಹದಿಹರೆಯದವರ ಮನೋಪರಿಸ್ಥಿತಿ, ಅವರನ್ನು ಆ ಪ್ರಾಯದಲ್ಲಿ ಕಾಡುವ ಮನೋರೋಗ, ವ್ಯಸನ, ಖಿನ್ನತೆ ಇವುಗಳ ಬಗ್ಗೆ ಚರ್ಚಿಸುವ ಲೇಖನಗಳು. ಪುಸ್ತಕದ ಹಲವೆಡೆ ಹೆತ್ತವರಿಗೆ ಮತ್ತು ಪೋಷಕರಿಗೆ ಅನೇಕಾನೇಕ ತಿಳುವಳಿಕೆಯ ವಿಷಯಗಳಿವೆ. ಆಧುನಿಕ ಜೀವನದ ವಾಸ್ತವಗಳೂ ಕೂಡಾ ಇವೆ. ಹದಿಹರೆಯದ ಮಕ್ಕಳಿರುವ ತಂದೆ-ತಾಯಿಗಳು ಅತ್ಯಗತ್ಯವಾಗಿ ಓದಬೇಕಾದ ಪುಸ್ತಕ. ಇತರರಿಗೂ ತಿಳಿದು ಕೊಳ್ಳುವ ಬಹಳ ವಸ್ತುಗಳಿವೆ. ದಂಪತಿಗಳಿಗೂ ಉಪಯುಕ್ತ ಸಲಹೆಗಳಿವೆ.

ಉದಾಹರಣೆಗೆ ಪುಟ 147ರಲ್ಲಿರುವ ಒಂದು ಪುಟ್ಟ ಪ್ಯಾರಾಗ್ರಾಫ್ ನೋಡಿ ಹೀಗಿದೆ:

“ಮಕ್ಕಳನ್ನು ಪೋಷಿಸುವ ಪ್ರಕ್ರಿಯೆಯಲ್ಲಿ ನಾವು ನಮ್ಮನ್ನು ಪೋಷಿಸಿಕೊಳ್ಳುತ್ತೇವೆ. ನಮ್ಮ ವ್ಯಕ್ತಿತ್ವವನ್ನು ಇನ್ನೂ ಹದವಾಗಿಸಿಕೊಳ್ಳುತ್ತೇವೆ. ಇದು ನಮ್ಮ ಮಕ್ಕಳು ನಮಗೆ ನೀಡುವ ಕೊಡುಗೆ. ಮಕ್ಕಳನ್ನು ಪೋಷಿಸುವುದು ಯಾರೂ ಕಲಿಸಲು ಸಾಧ್ಯವಿಲ್ಲ. ಯಾಕೆಂದರೆ ಇದು ತಂತ್ರ ಅಥವಾ ಕೆಲಸ ಅಲ್ಲ. ಇದು ಕಲೆ, ನಮ್ಮ ಜೀವನವನ್ನು ಹಸನಾಗಿಸಲು ಒಂದು ಅವಕಾಶ ಮಾಡಿಕೊಡುವ ಕಲೆ.”

ಲೇಖಕದ್ವಯರು ಈ ವೈದ್ಯಕೀಯ ಕ್ಷೇತ್ರದಲ್ಲಿ ಪಳಗಿದ ವೈದ್ಯರು, ತಮ್ಮ ಅನುಭವಗಳನ್ನು ರಚನಾತ್ಮಕವಾಗಿ ಹಂಚಿಕೊಂಡಿದ್ದಾರೆ. ಇದಲ್ಲದೇ ಖ್ಯಾತನಾಮರಾದ ಶ್ರೀ. ಎಸ್.ಎಲ್. ಭೈರಪ್ಪ, ದೀಪಿಕಾ ಪಡುಕೋಣೆ, ಟೈಗರ್ ವುಡ್, ಪರೇಶ್ ರಾವಲ್ ಇವರುಗಳೆಲ್ಲಾ ಒಂದು ಹಂತದಲ್ಲಿ ಮಾನಸಿಕವಾಗಿ ಬಳಲಿದ್ದು ನಂತರ ಅದರಿಂದ ಗುಣಮುಖರಾದ ಉಲ್ಲೇಖವಿದೆ.

ಒಟ್ಟಿನಲ್ಲಿ ಇದು ಒಂದು ಸದುಪಯೋಗಿ ಕೃತಿ, ಇಂತಹ ಕೃತಿಯನ್ನು ಕನ್ನಡಕ್ಕೆ ನೀಡಿದ ಲೇಖಕರು ಡಾ. ಪಿ.ವಿ. ಭಂಡಾರಿ, ಹರೀಶ್ ಶೆಟ್ಟಿ ಬಂಡ್ಸಾಲೆ ಮತ್ತು ಸಾವಣ್ಣಾ ಪ್ರಕಾಶಕರಿಗೆ ಹೃತ್ಪೂರ್ವಕ ಧನ್ಯವಾದಗಳು.

 

 

 

Tags: ಹದಿನಂಟು, ಕನ್ನಡ ಪುಸ್ತಕ, book review