ತೇಜೋ ತುಂಗಭದ್ರಾ

Posted on: 17 Jan 2020

Category: Book Review

Blog Views: 1991

ಪುಸ್ತಕ: ತೇಜೋ ತುಂಗಭದ್ರಾ

ಲೇಖಕರು: ಶ್ರೀ ವಸುಧೇಂದ್ರ

ಪ್ರಕಾಶಕರು: ಛಂದ ಪುಸ್ತಕ

ಪುಸ್ತಕ ಅಥವಾ ಚಲನಚಿತ್ರವೊಂದು ಬಿಡುಗಡೆಯ ಮುನ್ನವೇ ಸದ್ದು ಮಾಡಿ, ಮೊದಲ ದಿನವೇ ಸೂಪರ್ ಹಿಟ್ ಎಂದು ಕರೆಸಿ ಕೊಂಡರೆ ನಮಗೆ ಅದರ ಬಗ್ಗೆ ಅತಿಯಾದ ನಿರೀಕ್ಷೆ ಮೂಡುವುದು ಸಹಜ. ಅಂತೆಯೇ ಮಳಿಗೆಯಲ್ಲಿ ಈ ಪುಸ್ತಕ ಕೊಂಡಾಗ ಉದ್ದದ ಚೆಕ್ ಔಟ್ ಲೈನಿನಲ್ಲೇ ಇದನ್ನು ಓದಲು ಶುರು ಮಾಡಿದೆ. ಮನೆಗೆ ಬಂದು ತಲುಪಿದಾಗ ಮೊದಲ ಅಧ್ಯಾಯ ಮುಗಿಸಿ “ಅಬ್ಬಬ್ಬಾ ಎಂತಹ ಅದ್ಭುತ ಆರಂಭ, ಒಳ್ಳೆಯ ಪುಸ್ತಕ ಕೈ ಸೇರಿತು” ಎಂದು ಮನದಲ್ಲೇ ಅಂದುಕೊಂಡು ಎಡೆಬಿಡದೆ ಓದುತ್ತಾ ಹೋದೆ.

450 ಪುಟಗಳ ಈ ಪುಸ್ತಕದ ಓದಿನ ಹಾದಿಯಲ್ಲಿ ಕಥಾ ಸನ್ನಿವೇಶಗಳು ನಿಮ್ಮ ಕಣ್ಣ ಮುಂದೆ ಕಟ್ಟಿ ಕೊಳ್ಳುವುದು ನಿಸ್ಸಂದೇಹ. ಹೊಸ ಹೊಸ ವಿಚಾರಗಳು, ಅನೇಕ ಶುಭೋಕ್ತಿಗಳು, ಇತಿಹಾಸದ ಮರೆತ ಪುಟಗಳು, ಅದರ ಜೊತೆಗೆ ಅರಿವೇ ಇಲ್ಲದ ಪುಟಗಳು ತೆರೆದು ಕೊಳ್ಳುತ್ತವೆ. ಅಧ್ಯಾಯಗಳು ತೇಜೋ, ತುಂಗಭದ್ರಾ, ತೇಜೋ ಹೀಗೆ ಸರದಿ ಪ್ರಕಾರ ಬರುತ್ತವೆ. ಬಹುಮಟ್ಟಿಗೆ ಗೊತ್ತಿರುವ ನಮ್ಮ ತುಂಗಭದ್ರಾ / ವಿಜಯನಗರ ಇತಿಹಾಸಕ್ಕಿಂತಲೂ, ಗೊತ್ತಿಲ್ಲದ ತೇಜೋ ನದಿಯ ದಡದಲ್ಲಿ ನಡೆವ ಅಧ್ಯಾಯಗಳೇ ನನಗೆ ಇಷ್ಟವಾದವು. ಇತಿಹಾಸದ ಹಿನ್ನೆಲೆಯುಳ್ಳ, ಆ ಕಾಲಘಟ್ಟದಲ್ಲಿ ನಡೆದಿರುವ ಕೆಲವು ಸೂಕ್ಷ್ಮ ವಿಚಾರಗಳನ್ನು ಪರಿಚಯಿಸುವ ಪುಸ್ತಕವಾಗಿ ಇದು ಖಂಡಿತವಾಗಿ ಸಫಲವಾಗಿದೆ. ಪುಸ್ತಕ ರಚನೆಗೆ ಲೇಖಕರ ಮೂರು ವರ್ಷಗಳ ಶ್ರಮ ಪುಟ-ಪುಟದಲ್ಲೂ ಎದ್ದು ಕಾಣುತ್ತದೆ.

ಇಷ್ಟಾದರೂ ಇದು ಕೊರತೆಗಳಿಲ್ಲದ ಪುಸ್ತಕವೆಂದು ನನಗೆ ಅನಿಸಲಿಲ್ಲ. ಪುಸ್ತಕದ ಮಧ್ಯ ಭಾಗದಲ್ಲಿ ಅತಿಯಾದ ಲೈಂಗಿಕತೆಯ ವಿಶ್ಲೇಷಣೆಗಳು, ಗುಪ್ತಾಂಗಗಳ ಅನಗತ್ಯ ಉಲ್ಲೇಖ, ಸಂಪ್ರದಾಯಗಳ ಕ್ರೂರತೆಯನ್ನು ವೈಭವಿಕರಿಸುವ ವರ್ಣನೆಗಳು ಸ್ವಲ್ಪ ಕಿರಿಕಿರಿ ಅನಿಸಿತು. ಒಮ್ಮೊಮ್ಮೆ ನಮ್ಮ ಪೂರ್ವಜರು/ ಆ ಶತಮಾನದ ಗಂಡಸರು ಕೇವಲ ಹೆಣ್ಣಿನ ದೇಹ ಸುಖ ಅನುಭವಿಸುವುದಕ್ಕಾಗಿಯೇ ಜೀವಿಸಿದ್ದರೇ ಎಂದು ಸಂದೇಹ ಮೂಡಿಸುವಷ್ಟು ಅದರ ಬಗ್ಗೆ ಚರ್ಚೆ ಇದೆ. ಹಾಗೆಯೇ ಮೂಲಕತೆ / ಮುಖ್ಯ ಸಂಘರ್ಷಕ್ಕೆ (conflict) ಅನುಗುಣವಾಗಿ ಉಳಿದ ಸನ್ನಿವೇಶಗಳು/ ಉಪಕಥಾವಸ್ತು (sub-plot) ಮೂಡಿಬರದೆ, ಕೆಲವು ಕಡೆ ಬಲವಂತವಾಗಿ ಹೇರಿದಂತೆ ಅನಿಸಿತು. ಅನೇಕ ಸುಂದರ ಹೂಗಳನ್ನು ಆಯ್ಕೆ ಮಾಡಿ ಅವುಗಳ ದಾರ ಪೋಣಿಸಿದಾಗ, ಬಿಡಿ ಹೂವಿಗಳಿಗಿರುವಷ್ಟು ಅಂದ ಅವುಗಳಿಂದಲೇ ಪೋಣಿಸಿದ ಹಾರಕ್ಕೆ ಇರಲಿಲ್ಲ ಎಂಬ ಭಾವನೆ ಮೂಡಿತು. ಸಾಮಾನ್ಯವಾದ ಪ್ರೇಮ ಕತೆಯ ಬದಲು ಮುಖ್ಯ ಸಂಘರ್ಷ ಬೇರೆ ಯಾವುದಾದರೂ ವಿಷಯದಲ್ಲಿ ಬರೆದಿದ್ದರೆ ಈ ಒಂದು ಉತ್ತಮ ಕಾದಂಬರಿ ಇನ್ನೂ ಅತ್ಯುತ್ತಮವಾಗಬಹುದಿತ್ತು ಎಂದು ನನ್ನ ವ್ಯಯಕ್ತಿಕ ಅಭಿಪ್ರಾಯ.

ಕಾದಂಬರಿಯ ಮಧ್ಯೆ ಕೃಷ್ಣದೇವರಾಯರು ತಾವು ಬರೆದ ಆಮುಕ್ತಮಾಲ್ಯ ಕೃತಿಯ ವಿಮರ್ಶೆಯನ್ನು ಗುಣಸುಂದರಿಯ ಬಳಿ ಕೇಳಿದಾಗ, ಗುಣಸುಂದರಿಯು ಆ ಕೃತಿಯನ್ನು ಬಹಳವಾಗಿ ಹೊಗಳುತ್ತಾಳೆ. ಆಗ ರಾಯರು “ಬರೀ ಹೊಗಳಿಕೆ ಆಯ್ತು ಸುಂದರಿ, ಬೆಲ್ಲದ ಜೊತೆ ಬೇವೂ ನೀಡುವುದು ಸಂಪ್ರದಾಯವಲ್ಲವೇ?” ಎಂದು ಕೇಳುತ್ತಾರೆ. ಅದರಂತೆ ಬೆಲ್ಲ-ಬೇವು ಎರಡನ್ನೂ ಸೇರಿಸಿ ಈ ನನ್ನ ಸಣ್ಣ ವಿಮರ್ಶೆ! ಯುಗಾದಿಯ ಮೂರು ತಿಂಗಳ ಮುಂಚೆಯೇ ಬೇವು-ಬೆಲ್ಲ ತಿಂದ ಅನುಭವ. ಈ ಪುಸ್ತಕ ಹಲವು ದಿನಗಳವರೆಗೆ ನನ್ನನ್ನು ನಾನಾ ರೀತಿಯಿಂದ ಕಾಡುವುದು ಖಂಡಿತ.

ಇಂತಿ,

ವಿಠಲ್ ಶೆಣೈ

 

 

Tags: ತೇಜೋ ತುಂಗಭದ್ರಾ, book review