ಬನ್ನಿ, ಪುಸ್ತಕ ಪ್ರಕಟಿಸಿ

Posted on: 09 Feb 2020

Category: Kannada Blog

Blog Views: 3065

"ನಿಮ್ಮಲ್ಲಿ ಬರವಣಿಗೆಯ ಉತ್ಸಾಹವಿದೆ, ಲೇಖಕರಾಗುವ ಹುಮ್ಮಸ್ಸು ಇದೆ. ಆದರೆ ನಿಮ್ಮ ಪುಸ್ತಕವನ್ನು ಪ್ರಕಟಿಸಲು ಪ್ರಕಾಶಕರು ಸಿಗುತ್ತಿಲ್ಲ. ಯಾವುದೇ ಕ್ಷೇತ್ರದಂತೆ ಇಲ್ಲೂ ಹೊಸಬರಿಗೆ ಅವಕಾಶ ಸಿಗುವುದು ಬಹಳ ಕಡಿಮೆ. ಆಗ ಏನು ಮಾಡುವಿರಿ?"

 

ಇನ್ನೂ ಪುಸ್ತಕ ಪ್ರಕಟಿಸದ ಇಲ್ಲಿರುವ ಉದಯೋನ್ಮುಖ, ಪ್ರತಿಭಾವಂತ ಲೇಖಕರ ಗಮನಕ್ಕೆ

ನಿಮ್ಮಲ್ಲಿ ಬರವಣಿಗೆಯ ಉತ್ಸಾಹವಿದೆ, ಲೇಖಕರಾಗುವ ಹುಮ್ಮಸ್ಸು ಇದೆ. ಆದರೆ ನಿಮ್ಮ ಪುಸ್ತಕವನ್ನು ಪ್ರಕಟಿಸಲು ಪ್ರಕಾಶಕರು ಸಿಗುತ್ತಿಲ್ಲ. ಯಾವುದೇ ಕ್ಷೇತ್ರದಂತೆ ಇಲ್ಲೂ ಹೊಸಬರಿಗೆ ಅವಕಾಶ ಸಿಗುವುದು ಬಹಳ ಕಡಿಮೆ. ಆಗ ಏನು ಮಾಡುವಿರಿ?

ಒಂದು ಸುಲಭ ದಾರಿ ಎಂದರೆ ಅಂತರಜಾಲದಲ್ಲಿರುವ ಹಲವು ಸೆಲ್ಫ್ ಪಬ್ಲಿಷಿಂಗ್ ವೇದಿಕೆಗಳಲ್ಲಿ ಒಂದನ್ನು ಬಳಸಿ ಪುಸ್ತಕಗಳನ್ನು ಮುದ್ರಿಸುವುದು. ಆದರೆ ಬಹುತೇಕ ಸೆಲ್ಫ್ ಪಬ್ಲಿಷಿಂಗ್ ತಾಣಗಳು ಮುಂಗಡವಾಗಿ ನಿಮ್ಮಿಂದ ಪ್ಯಾಕೇಜ್ ಶುಲ್ಕವನ್ನು ಪಾವತಿ ಮಾಡಿಸಿ ಕೊಳ್ಳುತ್ತವೆ. ಈ ಎಲ್ಲಾ ತಾಣಗಳು ನಿಮಗೆ ಅಮೆಜೊನ್, ಫ್ಲಿಪ್-ಕಾರ್ಟ್ ಮತ್ತು ಇತರ ಇ-ಕಾಮರ್ಸ್ ತಾಣಗಳಲ್ಲಿ ನಿಮ್ಮ ಪುಸ್ತಕವನ್ನು ಮಾರಲು ಸುಲಭ ಮಾಡಿಸುತ್ತವೆ. ಆದರೆ ಇವುಗಳ ಮೂಲಕ ನಿಮ್ಮ ಪುಸ್ತಕಗಳನ್ನು ಮಾರುವುದು ಸುಲಭ ಮಾತೇನಲ್ಲ. ನೀವೇ ನಿಮ್ಮ ಬಂಧು-ಮಿತ್ರ ಬಳಗದವರಲ್ಲಿ ಪ್ರಚಾರ ಮಾಡಿ ಪುಸ್ತಕದ ಮಾರಾಟ ಮಾಡಬೇಕು. ನೀವು ಕೊಟ್ಟ ಪ್ಯಾಕೇಜ್ ಶುಲ್ಕದ ಮೊತ್ತವನ್ನು ಅಸಲು ಮಾಡುವುದು ಹರಸಾಹಸ ಅಥವಾ ಅಸಾಧ್ಯವೇ  ಸರಿ.

ಇನ್ನೊಂದು ದಾರಿ ನೀವೇ ಯಾವುದಾದರೂ ಮುದ್ರಣಾಲಯ ಹುಡುಕಿ ನಿಮ್ಮ ಪುಸ್ತಕವನ್ನು ಸ್ವತಃ ಮುದ್ರಿಸುವುದು. ಆದರೆ ಹೆಚ್ಚಿನ ಆಫ್ ಸೆಟ್ ಪ್ರಿಂಟಿಂಗ್ ಪ್ರೆಸ್ ನವರು 1000 ಪ್ರತಿಗಳನ್ನೇ ಮುದ್ರಿಸುವುದು. ಸುಮಾರು 150 ಪುಟಗಳ A5 ಗಾತ್ರದ 1000 ಪುಸ್ತಕಗಳನ್ನು ಪ್ರಕಟಿಸಲು 40 ರಿಂದ 50 ಸಾವಿರದ ವರೆಗೆ ಖರ್ಚು. 1000 ಪ್ರತಿಗಳು ನಿಮ್ಮ ಮನೆ ತಲುಪಿ ನೀವು ಮುದ್ರಣಕ್ಕೆ ಖರ್ಚು ಮಾಡಿದ ವೆಚ್ಚ ನೀಗಿಸಲು 400-500 ಪ್ರತಿಗಳನ್ನಾದರೂ ಮಾರಬೇಕು. ಇದು ಸಾಧ್ಯವಿಲ್ಲದಿದ್ದರೆ ನಷ್ಟ ನಿಮ್ಮ ಜೇಬಿಂದಲೇ!

ಹಾಗಾದರೆ ಬೇರೆ ಏನಾದರೂ ಉಪಾಯಗಳಿವೆಯೇ? ನಿಮ್ಮದೇ ಆದ ಕೆಲವು ಆಪ್ತ ಓದುಗರನ್ನು ಪುಸ್ತಕದ ಮೂಲಕ ತಲುಪ ಬಹುದೇ? ಹೌದು ಖಂಡಿತ ಸಾಧ್ಯ. ನಾನು ಹೇಳುವ ಈ ವಿಧಾನ ಕೇವಲ ನನ್ನ ಅನುಭವದ ಮೇಲೆ ಹೇಳುತ್ತಿದ್ದೇನೆ.

ಹೆಜ್ಜೆ 1: ನೀವು ಮೊದಲು ಮಾಡಬೇಕಾದ ಕೆಲಸ ನಿಮ್ಮ ಪುಸ್ತಕವನ್ನು ಬರೆದು ಮುಗಿಸುವುದು!

ಹೆಜ್ಜೆ 2: ನಿಮ್ಮ ಮುಂದಿನ ಕೆಲಸ, ನವ ಲೇಖಕರಾದ ನಿಮ್ಮ ಪುಸ್ತಕವನ್ನು ಕೊಳ್ಳಲು ಎಷ್ಟು ಜನರು ಸಿದ್ಧರಿದ್ದಾರೆ ಎಂದು ಕಂಡು ಹಿಡಿಯುವುದು. ಅದು 20 ಇರಬಹುದು, 100 ಇರಬಹುದು ಅಥವಾ 200 ಇರಬಹುದು. ನಿಮ್ಮ ಫೇಸ್ಬುಕ್, ಟ್ವಿಟ್ಟರ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ನಿಮ್ಮ ಓದುಗರು ಎಷ್ಟಿದ್ದಾರೆ ಎಂದು ತಿಳಿದು ಕೊಳ್ಳಿ.

ಹೆಜ್ಜೆ 3: ಮುಂದಿನ ಹೆಜ್ಜೆ ನಿಮ್ಮ ಪುಸ್ತಕವನ್ನು ನೀವೇ DTP ಮಾಡುವುದು. ಮೈಕ್ರೋಸಾಫ್ಟ್ ವರ್ಡ್ ಬಳಸಿ ಮುದ್ರಣ-ಸಿದ್ಧ ಪುಸ್ತಕಗಳನ್ನು ಸಿದ್ಧ ಪಡಿಸುವುದು ಕಷ್ಟವೇನಿಲ್ಲ. ಹಾಗೆಯೇ ಪವರ್ ಪಾಯಿಂಟ್ ಅಥವಾ ವರ್ಡ್ ಬಳಸಿ ನಿಮ್ಮ ಪುಸ್ತಕದ ಮುಖಪುಟ ತಯಾರಿಸುವುದು ಸುಲಭ ಸಾಧ್ಯ. ಒಳಪುಟ- ಮುಖ ಪುಟಗಳನ್ನು ತಯಾರಿಸುವ ಬಗ್ಗೆ ಮಾದರಿ youtube ವೀಡಿಯೊಗಳು ಇಲ್ಲಿವೆ:  

https://www.youtube.com/watch?v=0IGkyMhsr28     

https://www.youtube.com/watch?v=tiQp0PQh5Oo

ಹಾಗೆಯೇ ವಿವಿಧ sizeಗಳ ಪುಸ್ತಕದ template ಶ್ರೀ ನಾಗೇಶ್ ಕುಮಾರ್ ಸರ್ ಈ ಮುಂಚೆ ಹೇಳಿದ ನೆನಪು. ಅದನ್ನೂ ಬಳಸಿ ಪುಸ್ತಕ ಸಿದ್ಧಪಡಿಸಬಹುದು.

ಇವೆಲ್ಲವೂ ನಿಮಗೆ ಕಷ್ಟವಾದರೆ ಪ್ರೊಫೆಷನಲ್ DTP ಮಾಡುವವರ ಬಳಿ ಮುಖ ಪುಟ ಒಳ ಪುಟಗಳನ್ನು ತಯಾರಿಸಿ.

ಹೆಜ್ಜೆ 4: ಈಗ ನಿಮ್ಮ ಪುಸ್ತಕ ಮುದ್ರಣ-ಸಿದ್ಧವಾಗಿದೆ. ನಿಮಗೆ ಬೇಕಿದ್ದಷ್ಟೇ ಪ್ರತಿಗಳನ್ನು ಮುದ್ರಿಸಲು https://www.onlineprintingz.com/ ಎಂಬ ಜಾಲ ತಾಣವಿದೆ. ಇವರು ನಿಮಗೆ ಒಂದಿರಲಿ, ಹತ್ತಿರಲಿ, ನೂರಿರಲಿ ಎಷ್ಟು ಬೇಕೋ ಅಷ್ಟು ಪುಸ್ತಕಗಳನ್ನು ಮುದ್ರಿಸಿ ಕೊಡುತ್ತಾರೆ. ಇದುವರೆಗೂ ನಾನು ಇವರ ಬಳಿ ಇನ್ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬೇಡಿಕೆಯಂತೆ ಮುದ್ರಿಸಿ ತದ ನಂತರವೇ ಈ ಲೇಖನ ಬರೆಯುತ್ತಿದ್ದೇನೆ. ಬೆಂಗಳೂರಿಗೆ ಮೂರೇ ದಿನಗಳಲ್ಲಿ ಪುಸ್ತಕ ನಿಮ್ಮ ಮನೆಗೆ ತಂದು ಮುಟ್ಟಿಸುತ್ತಾರೆ. (ಒಮ್ಮೆ 24 ತಾಸಿನೊಳಗೆ ಡೆಲಿವರಿ ಮಾಡಿದ್ದೂ ಇದೆ!). ಚೆನ್ನೈಯಲ್ಲಿರುವ ಈ ಸಂಸ್ಥೆ ದೇಶದ ಎಲ್ಲಾ ಭಾಗಗಳಿಗೆ 10 ದಿನಗಳ ಒಳಗೆ ಪುಸ್ತಕ ಪ್ರೊಫೆಷನಲ್ ಕೊರಿಯರ್ ಮೂಲಕ ತಲುಪಿಸುತ್ತಾರೆ. 150 ಪುಟಗಳ ಪುಸ್ತಕದ ಪ್ರತಿಯೊಂದಕ್ಕೆ ಸುಮಾರು 100 ರೂಪಾಯಿ ಖರ್ಚಾಗಬಹುದು, ನಿಖರವಾಗಿ ಎಷ್ಟೆಂದು ಅವರ ಜಾಲತಾಣದಲ್ಲಿ ಕ್ಯಾಲ್ಕುಲೇಟರ್ https://www.onlineprintingz.com/print-with-perfect-binding/  ಬಳಸಿ ತಿಳಿದುಕೊಳ್ಳಿ. ಅಂದ ಹಾಗೆ ನನಗೂ-ಈ ಸಂಸ್ಥೆಗೂ ಯಾವುದೇ ಸಂಬಂಧ / ಕಮಿಷನ್ ಇಲ್ಲ! ಸುಮಾರು ಹತ್ತು ಆರ್ಡರ್ ಕೊಟ್ಟು ಅವರ ಕಾರ್ಯ ವೈಖರಿ, ಮುದ್ರಣದ ಗುಣಮಟ್ಟ ನೋಡಿ ಅದನ್ನು ಇತರರ ಜೊತೆ ಹಂಚುವ ವಿಶ್ವಾಸ ಬಂದ ಮೇಲೆಯೇ ನಿಮ್ಮಲ್ಲಿ ಅನುಭವ ಹಂಚುತ್ತಿದ್ದೇನೆ ಅಷ್ಟೇ. ಜೊತೆಗೆ ಅವರ ದೂರವಾಣಿ – ವಾಟ್ಸ್ ಆಪ್ ಗಳು ಸುಲಭವಾಗಿ ಲಭ್ಯವಿದೆ. ತಮಿಳು ಅಥವಾ ಇಂಗ್ಲೀಷ್ ನಲ್ಲಿ ವ್ಯವಹರಿಸುತ್ತಾರೆ. ಹೆಸರಾಂತ ಸೆಲ್ಫ್ ಪಬ್ಲಿಷಿಂಗ್ ವೇದಿಕೆಗಳು ಇವರ ಬಳಿಯೇ ಮುದ್ರಣ ಮಾಡುವುದು ಎಂದು ನನಗೆ ತಿಳಿದಿದೆ.

ನಿಮ್ಮ ಸಿದ್ಧ ಪುಸ್ತಕದ ಒಂದು ಪ್ರತಿಯನ್ನು ಮೊದಲು ಮಾಡಿಸಿಕೊಂಡು, ಸಂತೃಪ್ತರಾದ ನಂತರವೇ ಉಳಿದ ಪ್ರತಿಗಳನ್ನು ಮುದ್ರಿಸಿ ಕೊಳ್ಳಿ. ಹೆಜ್ಜೆ 2 ರಲ್ಲಿ ನೀವು ತಿಳಿದುಕೊಂಡ ಓದುಗರ ಸಂಖ್ಯೆಗಿಂತ ಸ್ವಲ್ಪ ಹೆಚ್ಚು ಪ್ರತಿಗಳನ್ನು ಮುದ್ರಿಸಿ ನಿಮ್ಮ ಮನೆಗೆ ತರಿಸಿ, ನಂತರ ನೀವು ನಿಮ್ಮ ಓದುಗರಿಗೆ India post ನ unregistered parcel  ಸೇವೆಯ ಮೂಲಕ ಕಳುಹಿಸಿದರೆ ಸ್ವಲ್ಪ ಕಡಿಮೆ ವೆಚ್ಚದಲ್ಲಿ ಆಗುತ್ತದೆ. ಈ ಕಿರಿಕಿರಿ ಬೇಡವೆಂದರೆ ನೀವೇ ಒಂದೊಂದೇ ಪುಸ್ತಕವನ್ನು ಮೇಲಿನ ಜಾಲ ತಾಣದ ಮೂಲಕ ನೇರವಾಗಿ ಓದುಗರಿಗೆ ಆರ್ಡರ್ ಮಾಡಿ.

 ಹಾಂ ಕೆಲವು ಎಚ್ಚರಿಕೆಗಳು, ಇವರ ಬಳಿ ಮುದ್ರಿಸಿದರೆ ನಿಮ್ಮ ಮುದ್ರಣ ವೆಚ್ಚ(ಪ್ರತಿ ಪುಸ್ತಕಕ್ಕೆ) ಆಫ್ ಸೆಟ್ ಪ್ರಿಂಟಿಂಗ್ ಗಿಂತ ಸ್ವಲ್ಪ ಹೆಚ್ಚು, ಆದರೆ ನಿಮಗೆ ಬೇಕಿದ್ದಷ್ಟೇ ಪುಸ್ತಕಗಳನ್ನು ಮುದ್ರಿಸುವ flexibility ನಿಮಗೆ ಸಿಗುತ್ತದೆ. ದೊಡ್ಡ ಮೊತ್ತವನ್ನು ಪಾವತಿ ಮಾಡಿ ಸಾವಿರ ಪ್ರತಿ ಮನೆಗೆ ತರಿಸಿ, ನಂತರ ತಲೆಯ ಮೇಲೆ ಕೈ ಇಟ್ಟು ಇವನ್ನು ಹೇಗೆ ಸಾಗಿಸುವುದು ಎಂಬ ಚಿಂತೆ ಇರುವುದಿಲ್ಲ. ಹಾಗೆಯೇ ಅಮೆಜಾನ್, ಫ್ಲಿಪ್ ಕಾರ್ಟ್ ಗಳಲ್ಲಿ ಮಾರಾಟ ಮಾಡಲು ಈ ವಿಧಾನ ಸೂಕ್ತವಲ್ಲ. ಇದು ಎಷ್ಟಿದ್ದರೂ ನಿಮ್ಮ ಒಂದು ಸಣ್ಣ ಓದುಗ ವರ್ತುಲವನ್ನು ನಷ್ಟವಿಲ್ಲದೇ ತಲುಪುವ ವಿಧಾನ. ಲೇಖಕರಿಂದ ಓದುಗರಿಗೆ ನೇರವಾಗಿ (peer-to-peer) ತಲುಪುವ ಒಂದು ವಿಧಾನ. ಇದನ್ನು ಬಳಸಿ ನೀವು ನಿಮ್ಮ ನೆಚ್ಚಿನ ಪುಸ್ತಕ ಪ್ರಕಟಿಸಿ, ಹೆಚ್ಚು ಹೆಚ್ಚು ಓದುಗರನ್ನು ಗಳಿಸಿ, ಪ್ರಕಾಶಕರು ಮತ್ತು ಪುಸ್ತಕ ಮಳಿಗೆಗಳು ನಿಮ್ಮನ್ನು ಸಂಪರ್ಕಿಸುವಷ್ಟು ಯಶಸ್ಸು ನಿಮ್ಮದಾಗಲಿ ಎಂದು ಆಶಿಸುತ್ತೇನೆ.

ಸೂಚನೆ: ಮೊದಲ ಸಲವೇ ನಿಮಗೆ ಒಳ್ಳೆಯ ಪ್ರಕಾಶಕರು ಸಿಕ್ಕಿದರೆ ಅದರಷ್ಟು ಒಳ್ಳೆಯ ಬೆಳವಣಿಗೆ ಇನ್ನೊಂದಿಲ್ಲ. ಅದರ ಭಾಗ್ಯವಿಲ್ಲದವರಿಗೆ ಮಾತ್ರ ಈ ಲೇಖನ!

ಸಣ್ಣ ಸಂಖ್ಯೆಯಲ್ಲಿ ನಿಮ್ಮದೇ ಆದ ಪ್ರಿಂಟ್-ಆನ್-ಡಿಮ್ಯಾಂಡ್ ಪುಸ್ತಕ ಮುದ್ರಿಸುವುದರಲ್ಲಿ ಈ ಕೆಲವು ಪ್ರಯೋಜನ/ಸಲಹೆಗಳಿವೆ:

- ಎಷ್ಟೊಂದು ಸಲ ಕರಡು ತಿದ್ದಿದರೂ ಸರಾಸರಿ 30,000 ದಷ್ಟು ಪದಗಳಿರುವ ನಿಮ್ಮ ಕೃತಿಯಲ್ಲಿ ಹತ್ತು ಹಲವಾರು ಪದಗಳ ಕಾಗುಣಿತ, ವಾಕ್ಯಗಳ ರಚನೆಯಲ್ಲಿ ಲೋಪದೋಷಗಳು ಉಳಿಯುವುದು ಸಾಮಾನ್ಯ. ಅದನ್ನು ಸರಿಪಡಿಸಲು ನೀವು 1000 ಪ್ರತಿಗಳು ಖಾಲಿಯಾಗುವ ತನಕ ಕಾಯಬೇಕಿಲ್ಲ. ಮೊದಲ ಬ್ಯಾಚ್ ನ ಹತ್ತು-ಇಪ್ಪತ್ತು ಪ್ರತಿಗಳನ್ನು ಓದಿದ ನಿಮ್ಮ ಸಹೃದಯಿ ಓದುಗರು ಇಂತಹ ತಪ್ಪನ್ನು ನಿಮ್ಮ ಗಮನಕ್ಕೆ ತರುವ ಸಾಧ್ಯತೆಗಳಿವೆ. ಆಗ ಅವುಗಳನ್ನು ಪರಿಷ್ಕರಿಸುತ್ತಾ ನಿಮ್ಮ ಕೃತಿಯು ಬಹಳ ಬೇಗ ದಿನಕಳೆದಂತೆ ಲೋಪ-ಮುಕ್ತವಾಗುತ್ತವೆ. ಇತರ ಸೆಲ್ಫ್-ಪಬ್ಲಿಷಿಂಗ್ ಪ್ಲಾಟ್ಫಾರ್ಮ್ ಗಳಲ್ಲಿ ನನಗೆ ತಿಳಿದಂತೆ ಪ್ರತಿಗಳನ್ನು ತಿದ್ದುವುದು ಅಸಾಧ್ಯ ಅಥವಾ paid ಸೇವೆಯಾಗಿರುತ್ತದೆ. ಕರಡು ತಿದ್ದುವಿಕೆಯ ಬಗ್ಗೆ ನಾಗೇಶ್ ಸರ್ ಬರೆದ ಪೋಸ್ಟ್ ಇಲ್ಲಿದೆ: https://www.facebook.com/groups/nanobbapustakapremi/permalink/1757793424288107/

- ನಿಮ್ಮ ಪುಸ್ತಕದ ಒಳ ಪುಟಗಳ ಎಡಿಟಿಂಗ್ ಮಾಡುವ ಸ್ವಾತಂತ್ರ್ಯ ನಿಮ್ಮ ಬಳಿ ಇರುವುದರಿಂದ, ನೀವು ಯಾವುದಾದರೂ ಓದುಗರಿಗೆ ಅವರಿಗೆ ಬೇಕಾದ ಪರ್ಸನಲ್ ಮೆಸೇಜ್ / ವ್ಯಯಕ್ತಿಕ ಸಂದೇಶಗಳನ್ನು ಒಳ ಪುಟದಲ್ಲಿ ಪ್ರಿಂಟ್ ಮಾಡಿ ಕೆಲವು ಪ್ರತಿಗಳನ್ನು ಅವರ ವಿಶೇಷ ಸಂದರ್ಭಕ್ಕೆ ತಯಾರಿಸಬಹುದು. ಉದಾ: ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ದೀಪಾವಳಿ ಹಬ್ಬ, ರಾಜ್ಯೋತ್ಸವ ಶುಭಾಶಯಗಳೊಂದಿಗೆ! ಇಂತಹ ಪರ್ಸನಲ್ ಪ್ರಿಂಟೆಡ್ ಪ್ರತಿಗಳನ್ನು ನಿಮ್ಮ ಓದುಗರು ಮೆಚ್ಚಬಹುದು. ಇದರ ವೆಚ್ಚ ಹೆಚ್ಚೇನೂ ಆಗುವುದಿಲ್ಲ. 10 ಪ್ರತಿಗಿಂತ ಹೆಚ್ಚಾದರೆ ಮೂಲ ದರದಲ್ಲೇ ಈ ಪರ್ಸನಲ್ ಪ್ರತಿಗಳು ಮುದ್ರಿತವಾಗಬಹುದು..

- ಹಾಗೆಯೇ ನೀವು ಬೇರೆ ಬೇರೆ ಮುಖಪುಟಗಳನ್ನು ತಯಾರಿಸಿದರೆ ಒಂದೊಂದು ಬ್ಯಾಚ್ ಗೆ ಒಂದೊಂದು ಮುಖಪುಟ ಹಾಕಬಹುದು. ನಿತ್ಯ ಹೊಸ ಬಟ್ಟೆ ಹಾಕಿದಂತೆ 

- ನಿಮ್ಮ ಪುಸ್ತಕದ ಪ್ರಚಾರವನ್ನು ನೀವು “ಬಿಗ್ ಬ್ಯಾಂಗ್” ಪ್ರಮಾಣದಲ್ಲಿ ಮಾಡಬೇಕಾಗಿಲ್ಲ. ಹಂತ ಹಂತವಾಗಿ ಹೆಚ್ಚು ಮುದ್ರಣ ಮಾಡಿ ನಿಮ್ಮ ಅನುಕೂಲದಂತೆ ಟಾರ್ಗೆಟ್ ಓದುಗರನ್ನು ಮುಟ್ಟಬಹುದು.

- ಒಂದು ವೇಳೆ ನೀವು 500-1000 ಪ್ರತಿಗಳನ್ನು offset ಪ್ರಿಂಟಿಂಗ್ ಮಾಡುವುದೇ ಆಗಿದ್ದರೆ, ಮೊದಲು ಒಂದೆರಡು ಪ್ರತಿಗಳನ್ನು ಇಲ್ಲಿ ಮುದ್ರಿಸಿ, ಅದನ್ನು ಮಾದರಿ ಪುಸ್ತಕವಾಗಿ ಪರಿಶೀಲಿಸಿ ನಂತರ offset ಗೆ ಕೊಡಬಹುದು.

ಕೆಲವು ಸಲಹೆಗಳು ಅತಿರೇಕವೆನಿಸಿದರೆ ದಯವಿಟ್ಟು ನಿರ್ಲಕ್ಷಿಸಿ. ಲೇಖನದ ಮೊದಲ ಭಾಗವನ್ನು ಲೈಕ್ ಮಾಡಿ, ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ಇಲ್ಲಿಗೆ ಈ ಕ್ಷೇತ್ರದಲ್ಲಿ ನನ್ನ ಅನುಭವ ಹಂಚಿಕೆ ಮುಗಿದಿದೆ. ಮುಂದೇನಾದರೂ ಹೊಸ ವಿಷಯಗಳು ತಿಳಿದಲ್ಲಿ ಮತ್ತೆ ಬರೆಯುವೆ. ಹಾಗೆಯೇ ನಿಮ್ಮ ಅನುಭವ / ಅನಿಸಿಕೆ ಏನಾದರೂ ಇದ್ದಲ್ಲಿ ಹಂಚಿ ಎಂದು ಚಿಕ್ಕ ವಿನಂತಿ.

ಇನ್ನು ಕೊನೆಯದಾಗಿ ನಾನು ಪ್ರತಿಲಿಪಿಯಲ್ಲಿ ಬರೆದಿರುವ bitcoin / blockchain ಬಗೆಗಿನ ಕಾದಂಬರಿ “ನಿಗೂಢ ನಾಣ್ಯ’ ಪ್ರಕಟಿಸಿ ಎಂದು ಸುಮಾರು ಹತ್ತು ಓದುಗರು ಕೇಳಿದ್ದರು. ಆ ಕಾದಂಬರಿಯನ್ನು ಸ್ವಲ್ಪ ಪರಿಷ್ಕರಿಸಿ, ಮುಂದಿನ ದಿನಗಳಲ್ಲಿ ಇದೇ ವಿಧಾನದಲ್ಲಿ ಪ್ರಕಟಿಸಲಿದ್ದೇನೆ.

ಇಂತಿ ಪ್ರೀತಿಯಿಂದ,

ವಿಠಲ್ ಶೆಣೈ

 

Tags: ಬನ್ನಿ ಪುಸ್ತಕ ಪ್ರಕಟಿಸಿ, ಸೆಲ್ಫ್ ಪಬ್ಲಿಕೇಶನ್, ಪುಸ್ತಕ ಪ್ರಕಟಣೆ