"ನಮಸ್ಕಾರ,
ನನ್ನ ಹೆಸರು ಪ್ರಶಾಂತ. ಜಯನಗರ. ಬೆಂಗಳೂರು. ಮೂಲತಃ ಉಡುಪಿ ಜಿಲ್ಲೆ
ಮೊನ್ನೆ ಮೈ ಲ್ಯಾಂಗ ಆಪ್ ನಲ್ಲಿ ನಾನು ನಿಮ್ಮ ಹುಲಿ ವೇಷ ಕೊಂಡು ಓದಿದೆ. ಏಳು ಕಥೆಗಳು ರೋಚಕವಾಗಿದ್ದವು. ಓದಲು ಹಿಡಿದ ಮೇಲೆ ಕೆಳಗಿಡಲಾಗಲಿಲ್ಲ. ಮನೆಯಲ್ಲಿ ಪರೀಕ್ಷೆ ಇದೆಯೆ ಎಂದು ಕಾಲೆಳೆದರು.
ಹೀಗೆ ಮುಂದುವರೆಸಿ, ನಮ್ಮನ್ನೆಲ್ಲಾ ರಂಜಿಸಿ"
- ಪ್ರಶಾಂತ್
"ಮೊದಲ ನೋಟದಲ್ಲೇ ಮುಖಪುಟ ಮನ ಸೆಳೆಯಿತು. ಅಷ್ಟೇ ಅಲ್ಲ, ಒಳಗಿನ ಕತೆಗಳನ್ನು ಓದಿ ಮನಸ್ಸಿಗೆ ಸಂತೋಷವೂ ಸಿಕ್ಕಿತು. ಇಷ್ಟು ಪೀಠಿಕೆ ಆದ ಮೇಲೆ ಒಂದು ಕತೆಯ ಬಗ್ಗೆ ಹೇಳಲೇಬೇಕು. ಈ ಲೇಖಕರ ಪುಸ್ತಕವನ್ನು ಇದೇ ಮೊದಲು ನಾನು ಓದುತ್ತಿರುವುದು. ಆ ದೃಷ್ಟಿಯಿಂದ ಇವರು ನನ್ನ ಓದಿಗೆ ಹೊಸಬರು. ಹಾಗಾಗಿ ಕುತೂಹಲ ಇತ್ತು. ಇವರ ಬರಹದಲ್ಲಿ ಈಗಿನವರಿಗೆ ಬೇಕಾದ ವಸ್ತು ವಿಷಯ, ನೇರವಾದ ನಿರೂಪಣೆ ಮತ್ತು ಸ್ಪಷ್ಟತೆ ಕಾಣಿಸಿತು. ಎಲ್ಲದಕ್ಕೂ ಪ್ರೂಫ್ ಕೇಳುವ ಕಾಲವಿದು. ಈ ಕತೆ ಕೇಳೋಣ.
ಕೀರ್ತಿ ಟ್ರಾವೆಲ್ಸ್ : ಈ ಕತೆಯ ಪಾತ್ರಗಳು ಒಬ್ಬಳು ಯುವತಿ ಮತ್ತು ಇಬ್ಬರು ಯುವಕರು ಮಾತ್ರ. ಕೀರ್ತಿ ಟ್ರಾವೆಲ್ಸ್ ರವರ ಬಸ್ಸಲ್ಲಿ, ರಾತ್ರಿಯಲ್ಲಿ ಬೆಂಗಳೂರಿಂದ ಮಂಗಳೂರಿಗೆ ಹೋಗುವಾಗ ರಚಿತ್ ಮತ್ತು ಕೀರ್ತಿ ಅಕ್ಕಪಕ್ಕ ಸೀಟಿನಲ್ಲಿ ಕುಳಿತು ಹೋಗಬೇಕಾದ ಅನಿವಾರ್ಯತೆ ಬಂತು. ಮೊದಲು ಗೊಣಗಿದರೂ, ಕೀರ್ತಿ ರಚಿತನೊಂದಿಗೆ ಮಾತಿಗಿಳಿಯುತ್ತಾಳೆ.ಆಗ ತಿಳಿದ ವಿಷಯ ಹೀಗಿದೆ. ಇವರಿಬ್ಬರೂ ತಮ್ಮ ಮನೆಯ
ಹಿರಿಯರು ಹುಡುಕಿ, ಆರಿಸಿದ ಭಾವೀ ಜೀವನ ಸಂಗಾತಿಯ ಸಂದರ್ಶನಕ್ಕಾಗಿ ಹೋಗುತ್ತಿದ್ದರು.
ರಚಿತ ಕುತೂಹಲದಿಂದ ತಾನು ನೋಡಲಿರುವ ಕನ್ಯೆ ಶೈಲಾಳ ಬಗ್ಗೆ ಯೋಚಿಸುತ್ತಾ ಇದ್ದರೆ, ಯುವತಿ ಕೀರ್ತಿ ನಾಟಕವಾಡಿ ಈ ನೆಂಟಸ್ತನವನ್ನು ತಪ್ಪಿಸುವ ಯೋಜನೆ ಹಾಕಿಕೊಂಡಿದ್ದಳು. ತಂದೆ ಗೊತ್ತು ಮಾಡಿದ ವರ ಪ್ರಮೋದ್ ಕುಮಾರ್ ನನ್ನು ನೋಡುವ ಆಸಕ್ತಿ ಅವಳಿಗೆ ಇರಲಿಲ್ಲ. ಆಕೆಗೆ ಈಗಾಗಲೇ ಒಬ್ಬ ಬೋಯ್ ಫ್ರೆಂಡ್ ದೂರದ ಅಮೇರಿಕಾದಲ್ಲಿ ಇದ್ದ. ಅವನ ಹೆಸರು ಸೆಲ್ವ ರಾಜ್. ಪರಜಾತಿಯ ಗಂಡನ್ನು ಪ್ರೀತಿಸುವ ಧೈರ್ಯವಿದ್ದ ಹುಡುಗಿಗೆ ಹೆತ್ತವರಿಗೆ ಅದನ್ನು ತಿಳಿಸುವ ಸೌಜನ್ಯ ಮತ್ತು ಧೈರ್ಯ ಇರಲಿಲ್ಲ. ಮಂಗಳೂರಿಗೆ ಹೋಗಿ ರಚಿತ ಶೈಲಾಳನ್ನು ಭೇಟಿಯಾದಾಗ ಆಗಿದ್ದೇ ಬೇರೆ. ಅವಳಿಗೆ ಬೇರೆ ಬೋಯ್ ಫ್ರೆಂಡ್ ಇರುವುದನ್ನು ತಿಳಿಸಿ ಮದುವೆಯ ಪ್ರಸ್ತಾಪ ನಿಲ್ಲಿಸಿ ಬಿಡುತ್ತಾಳೆ. ಮತ್ತೆ ಬೆಂಗಳೂರಿಗೆ ಹೊರಟು ಅದೇ ಕೀರ್ತಿ ಟ್ರಾವೆಲ್ಸ್ ಬಸ್ಸಿನಲ್ಲಿ ರಚಿತ ಕುಳಿತಿರುವಾಗ ಪಕ್ಕದ ಸೀಟಿನಲ್ಲಿರುವ ಪ್ರಮೋದ್ ಕುಮಾರ್ ಪರಿಚಯವಾಯಿತು. ಫೋನ್ ನಲ್ಲಿ ಪ್ರಮೋದ್ ಕುಮಾರ್ ತನ್ನ ಗೆಳತಿಗೆ, 'ನಾನು ವಧು ಪರೀಕ್ಷೆಗೆ ಹೋಗಲಾಗಲಿಲ್ಲ, ಅವರ ಕಡೆಯವರು ಯಾರೋ ತೀರಿಕೊಂಡರು ಶೈಲಾ' ಎಂದು ಖುಷಿಯಿಂದ ಹೇಳುವುದನ್ನು ಕೇಳಿ ರಚಿತನಿಗೆ ಎಲ್ಲವೂ ಸ್ಪಷ್ಟವಾಗುತ್ತದೆ. ಕೀರ್ತಿಯನ್ನು ನೋಡಲು ಬರಲಿದ್ದ ಪ್ರಮೋದ್ ಕುಮಾರನೇ ರಚಿತನಿಗಾಗಿ ಆರಿಸಿದ ಶೈಲಾಳ ಬೋಯ್ ಫ್ರೆಂಡ್!
ಈ ಕತೆಯಲ್ಲಿ ಎರಡು ಜೊತೆ ಪ್ರೇಮಿಗಳ ಬಗ್ಗೆ ಪ್ರಸ್ತಾಪ, ಒಬ್ಬ ಪ್ರೇಕ್ಷಕ, ಬಸ್ಸಿನಲ್ಲಿ ಕಂಡಕ್ಟರ್ ಆಡುವ ತಮಾಷೆಯ ಮಾತುಗಳು ಇಷ್ಟೇ ಇದ್ದರೂ, ಓದುವಾಗ ಕುತೂಹಲ ಮತ್ತು ಆಸಕ್ತಿಯನ್ನು ಉಳಿಸಿಕೊಳ್ಳಲು
ಲೇಖಕರು ಸಶಕ್ತ ರಾಗಿದ್ದಾರೆ. ಒಂಥರಾ ಬೇರೆಯಾಗಿ
ಚೆನ್ನಾಗಿದೆ. ಉಳಿದ ಕತೆಗಳೂ ವೈವಿಧ್ಯಮಯವಾಗಿವೆ.
ಎಲ್ಲವನ್ನು ಒಟ್ಟಿಗೆ ಹೇಳುವುದೂ ಕೇಳುವುದೂ ಇಲ್ಲಿ ಕಷ್ಟವಾಗಬಹುದು. ಸಾಧ್ಯವಾದಲ್ಲಿ ಓದಿ ನೋಡಿ"
- Veena Nayak
"ನಿಜಕ್ಕೂ ಕುತೂಹಲಕಾರಿಯಾಗಿತ್ತು! ಅಂತ್ಯದಲ್ಲಿ ಏನಾಗಬಹುದು ಅಂತ ಊಹಿಸೋಕು ಆಗ್ಲಿಲ್ಲ. ಅದೇ ಕುತೂಹಲವನ್ನು ಕೊನೆವರೆಗೂ ಕಾಪಾಡಿಕೊಂಡಿದೆ ಈ ಕಥೆ"
- Sushmitha Sushmi (ಅವಳು, ಅವನು ಮತ್ತು ಕೋಣೆಗೆ ಪ್ರತಿಕ್ರಿಯೆ)
"ಉಸಿರು ಬಿಗಿ ಹಿಡಿದು ಓದಿದ ಅನುಭವ, ಕತೆ ತುಂಬಾ ಗೌಪ್ಯತೆಯಿಂದ ಸಾಗಿತ್ತು ಸಾರ್."
- Karthik SP (ಅವಳು, ಅವನು ಮತ್ತು ಕೋಣೆ ಕತೆಯ ಪ್ರತಿಕ್ರಿಯೆ)
"" ನೀ. ಹೀ. ಸಂ. " ಕಥೆಯಲ್ಲಿ ನಿದ್ರಾ ಹೀನರಾಗಿ ಸಂಘ ಕಟ್ಟಿಕೊಂಡು ಸ್ವೇಚ್ಚಾಚಾರ ಮಾಡುವ ಒಂದು ಹೊಸ ವರ್ಗದ ಕಥೆಯಿದೆ. ಇದು ಬಹುಶ: ಆಧುನಿಕ ಯುಗದಲ್ಲಿ ನಿದ್ರೆ ಬಿಟ್ಟು ಬೇಡದ ವಿಷಯದಲ್ಲಿ ಸುಮ್ಮನೆ ಕಾಲಹರಣ ಮಾಡುವವರ ಕಥೆ ಬರುತ್ತದೆ . ಕಶ್ಯಪ್ ಎಂಬಾತನ ಪ್ರಯತ್ನ ದಿಂದ ಮತ್ತೆ ಎಲ್ಲರೂ ಸುಖ ನಿದ್ರೆಯ ಕಡೆಗೆ ಮುಖ ಮಾಡುವ ಸ್ವಾರಸ್ಯ ಇಲ್ಲಿ ಕಾಣಬಹುದು . ಕೀರ್ತಿ ಟ್ರಾವೆಲ್ಸ್ ಕಥೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಬಸ್ಸಿನಲ್ಲಿ ಪಕ್ಕದ ಸೀಟಿನಲ್ಲಿ ಸಿಕ್ಕಿದ ಹುಡುಗಿಯ ಜೊತೆಗಿನ ರಚಿತ್ ನ ಮಾತುಕತೆ . ಇಬ್ಬರೂ ಮದುವೆ ಫಿಕ್ಸ್ ಮಾಡಲು ಹೋಗುವ ಸನ್ನಿವೇಶ . ಒಲ್ಲದ ಮನಸ್ಸು , ಹೆತ್ತವರ ಒತ್ತಡ , ಸಾಂಪ್ರದಾಯಿಕ ತಳಮಳ ಇದರ ಜೊತೆಗೆ ರಚಿತ್ ನ ಯೋಚನಾಲಹರಿ ಸುಂದರವಾಗಿ ಮೂಡಿಬಂದಿದೆ . ಹಿಂತಿರುಗಿ ಬರುವ ಬಸ್ಸಿನಲ್ಲಿ ಮತ್ತೆ ರಚಿತ್ ಪಕ್ಕದಲಿ ಕೂತ ವ್ಯಕ್ತಿಯ ಸಂಭಾಷಣೆಯಿಂದ ಕುದುರದ ಸಂಬಂಧದ ವಿಚಾರ ಬಯಲಾದದ್ದು .ಹೀಗೆ ವಿಭಿನ್ನ ಮುಕ್ತಾಯವನ್ನು ಪಡೆದ ಕಥೆಯಾಗಿದೆ . ಈಗಾಗಲೇ " ತಾಳಿಕೋಟೆಯ ಕದನದಲ್ಲಿ " ಕಾದಂಬರಿ ಹಾಗೂ "ಪಾರಿವಾಳಗಳು" ಲಲಿತ ಪ್ರಬಂಧ ಸಂಕಲನ ದಿಂದ ವಿಠಲ್ ಶೆಣೈ ಯವರು ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇನ್ನೂ ಹೆಚ್ಚಿನ ಕೃತಿಗಳು ಇವರಿಂದ ಅಪೇಕ್ಷಿಸುತ್ತ ಶುಭ ಹಾರೈಸುತ್ತೇನೆ."
- ಅಶೋಕ್ ವಳದೂರ್ (ವಿಮರ್ಶೆ ಭಾಗ - 2)
"ವಾಸ್ತವತೆಯ ಅನಾವರಣಗೊಳಿಸಿದ ವಿಠಲ್ ಶೆಣೈ ಯವರ "ಹುಲಿವೇಷ " ಆನ್ ಲೈನ್ ನಲ್ಲಿ ಯಾವುದೋ ಒಂದು ಪುಸ್ತಕವನ್ನು ಹುಡುಕಾಡುತ್ತಿದ್ದಾಗ ಪಕ್ಕನೆ ವಿಠಲ್ ಶೆಣೈ ಅವರ "ಹುಲಿವೇಷ " ಕಣ್ಣಿಗೆ ಬಿತ್ತು . ಅದರ ಮುಖಪುಟ ಹುಲಿಯ ವೇಷದ ಬಣ್ಣದಿಂದ ಆಕರ್ಷಿತನಾದೆ. ದಕ್ಷಿಣ ಕನ್ನಡ - ಉಡುಪಿಯವರಿಗೆ ಹುಲಿವೇಷ ಅಂದ್ರೆ ನೇ ಏನೋ ಒಂದು ತರಹ ಥ್ರಿಲ್ . ತಾಸೆಯ ಬಡಿತ ದ ಸದ್ಧಿಗೆ ಹುಲಿಯೆದ್ದು ಕುಣಿಯುತ್ತದೆ .
ಅಂತೂ ಪುಸ್ತಕ ಕೈ ಸೇರಿದ ದಿನದಂದೇ ಓದು ಶುರುಹಚ್ಚಿದೆ.
ಈ ಕಥಾ ಸಂಕಲನದಲ್ಲಿ ಒಟ್ಟು ಏಳು (೭) ಕಥೆ ಗಳಿವೆ . ಈ ಕಥಾ ಸಂಕಲನವನ್ನು ಟೋಟಲ್ ಕನ್ನಡ ಅವರು ಪ್ರಕಟಿಸಿದ್ದಾರೆ . ಇಲ್ಲಿ ಬರುವ ಕಥೆಗಳು ನಮ್ಮ ಅನುಭವಕ್ಕೆ ದಕ್ಕುವ ದಿನ ನಿತ್ಯದ ಕಥಾ ಹಂದರವನ್ನು ಹೊಂದಿದೆ. ಪ್ರಚಲಿತ ವಿದ್ಯಮಾನ , ಸಮಸ್ಯೆಗಳನ್ನು , ರಾಜಕೀಯ ಸರ್ಕಸ್ಸುಗಳನ್ನು ಪಾತ್ರಗಳೊಂದಿಗೆ ಬೇಕಾದಂತೆ ಹೆಣೆದು ಕಥೆಯಾಗಿಸಿದ್ದಾರೆ . " ಅದೇ ಧ್ವನಿ" ಕಥೆಯಲ್ಲಿ ಯಶಸ್ಸಿನ ಹಿಂದೆ ನಾಗಾಲೋಟದಲ್ಲಿ ಓಡಿ ಕೊನೆಗೆ ಅಶಕ್ತನಾಗಿ ಇನ್ನೋರ್ವ(ರಾಚ್ಚಪ್ಪ)ನ "ಧ್ವನಿ "ಯನ್ನು ಎರವಲು ಪಡೆಯುವ ಪ್ರಸಂಗಕ್ಕೆ ಒಳಗಾಗುತ್ತಾನೆ . ಹಣ ಅಲ್ಲೂ ಕೂಡ ಕುರುಡು ಕಾಂಚನವಾಗಿ ನಲಿಯುತ್ತದೆ. ಹಣದ ಮೋಹಕ್ಕೆ ಒಳಗಾಗದ ರಾಚಪ್ಪನ ನಿರ್ಲಿಪ್ತತೆ , ಮತ್ತೆ ವಾಸ್ತವ ಆಮಿಷ ಜಾಗಕ್ಕೆ ಮರಳುವ ಮನೋಜ್ ನ ಚಿತ್ರಣ ಬರುತ್ತದೆ . "ಹುಲಿ ವೇಷ " ಕಥೆಯಲ್ಲಿ ಕರ್ನಾಟಕ ದಲ್ಲೇ ನಡೆದ ವಿಧಾನಸಭೆ ಚುನಾವಣೆಯ ರಾಜಕೀಯ ಕುದುರೆ ವ್ಯಾಪಾರ ಒಂದು ಸ್ವಾರಸ್ಯವಾದ ಕಥೆಯೊಳಗೆ ಅವಿತು ಬಿತ್ತರವಾಗಿದೆ. ಮಂಗಳೂರಿನ ದೇವಿಯ ಮೆರವಣಿಗೆಯಲ್ಲಿ ಹುಲಿವೇಷ ದೊಳಗಿರುವ ಮುಖಗಳು ಅನಾವರಣಗೊಳ್ಳುವುದು ಕಥೆಗೆ ಮೆರುಗು ನೀಡಿದೆ . "ತಕ್ಷಕನ ದೋಷ " ಕಥೆಯಲ್ಲಿ ನಾಗರಾಧನೆಯ ಮಹತ್ವವನ್ನು ಒಂದು ಅನೀರಿಕ್ಷಿತ ಘಟನೆಯೊಂದಿಗೆ ಜೋಡಿಸಿದ್ದಾರೆ . ಆಸ್ತಿಕ ಮತ್ತು ನಾಸ್ತಿಕ ಮನೋಧರ್ಮದ ಒಂದು ಸಣ್ಣ ಸಂಘರ್ಷವನ್ನು ತೆರೆದಿಡುವ ಪ್ರಯತ್ನ ಈ ಕಥೆಯಲ್ಲಿ ನಡೆದಿದೆ. ಕರಾವಳಿ ಕರ್ನಾಟಕದಲ್ಲಿ ನಾಗಾರಾಧನೆಯು ಜನಮಾನಸವನ್ನು ಹೇಗೆ ಹಬ್ಬಿಕೊಂಡಿದೆ ಎಂಬ ಸಣ್ಣ ಸೂಚನೆ ಇಲ್ಲಿ ಸಿಗುತ್ತದೆ.
"ಅವಳು , ಅವನು ಮತ್ತು ಕೋಣೆ " ಒಂದು ವಿಭಿನ್ನ ನಿರೂಪಣಾ ಶೈಲಿಯ ಕಥೆ. ನಿಗೂಢತೆಯನ್ನು ಬಿಟ್ಟು ಕೊಡದೆ ಓದಿಸಿಕೊಂಡು ಹೋಗುವ ಕಥೆ . ಒಂದು ಕತ್ತಲ ಕೋಣೆಯಲ್ಲಿ ಇಬ್ಬರು ವಿಚಿತ್ರವಾದ ಬಂಧಿಗಳು . ಅವರ ನಡುವೆ ಮಾತುಕತೆ , ಇರುವಿಗಾಗಿ ಪರದಾಟ , ಅದರ ನಡುವೆ ಬೆಳೆಯುವ ಸಲುಗೆ , ಅಲ್ಲೇ ಹುಟ್ಟಿ ಕೊಳ್ಳುವ ವಾತ್ಸ್ಯಲ್ಯ . ಬಿಡುಗಡೆಯ ದಿನ ಬಂದಾಗ ಒಂದೇ ಮನೆಯಲ್ಲಿ ಇಬ್ಬರೂ ಅಕ್ಕ ತಮ್ಮನಾಗಿ ಹುಟ್ಟಿದ ಕ್ಷಣ . ಒಂದು ರೋಮಾಂಚನ ಕಥೆ . " ಬಂಗಾರದ ಬಳೆ " ಕಥೆಯಲ್ಲಿ ತನ್ನದಲ್ಲದ ಹಣವನ್ನು ಇಟ್ಟುಕೊಂಡು ಬಂಗಾರದ ಬಳೆ ಮಾಡಲು ಹೊರಟ ನವೀನ್ ಮತ್ತು ಸುಜಾತ ರ ಪಜೀತಿಯ ಕಥೆ ಇಲ್ಲಿದೆ. "
- ಅಶೋಕ್ ವಳದೂರ್ (ವಿಮರ್ಶೆ ಭಾಗ - 1)
"ನನಗೆ ಅನಿರೀಕ್ಷಿತವಾಗಿ ಪರಿಚಯವಾದ ಲೇಖಕ ಮಿತ್ರ ಶ್ರೀ ವಿಠಲ್ ಶೆಣೈ ರವರ ಚೊಚ್ಚಲ ಕಾದಂಬರಿ ತಾಳಿಕೋಟೆ ಕದನದಲ್ಲಿ
ಒಂದು ಭರವಸೆ ಮೂಡಿಸುವ ಕಾದಂಬರಿಯಾಗಿ ಓದುಗರ ಮನಸ್ಸಿನಲ್ಲಿ ಸ್ಥಾನ ಪಡೆದುಕೊಂಡಿರುವುದು ಎಲ್ಲರಿಗೂ ತಿಳಿದ ವಿಚಾರ. ಅವರ ಮೂರನೇ ಕೃತಿ ಹುಲಿವೇಷ ಸಹಜವಾಗಿಯೇ ತುಂಬಾ ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು.ಇದು ಏಳು ಕಥೆಗಳ ಒಂದು ಕಥಾ ಸಂಗ್ರಹ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕಲಾ ಪ್ರಕಾರವಾದ ಹುಲಿವೇಷ ಪ್ರಸ್ತುತ ಪುಸ್ತಕದಲ್ಲಿ ಒಂದು ನೀಳ್ಗತೆಯಾಗಿ ತೆರೆದುಕೊಂಡಿದೆ.
ಹುಲಿವೇಷದ ಕುಣಿತವನ್ನು ಆಸ್ವಾದಿಸಿರುವ ಪ್ರತ್ಯಕ್ಷಾನುಭವ ಇರುವ ನನಗೆ ಕಥೆಯ ವಸ್ತುವಿನ ನಿರ್ವಹಣೆ ಮುದ ನೀಡಿರು ವುದರ ಜೊತೆಗೆ ಹುಲಿ ಕುಣಿತದ ಪಟ್ಟುಗಳು ಮತ್ತೆ ಕಣ್ಣಿಗೆ ಕಟ್ಟಿಕೊಂಡದ್ದಂತೂ ನಿಜ. ಸಾಮಾನ್ಯವಾಗಿಯೇ ಮುಂದುವರೆಯುವ ಕಥೆಯ ನಡೆ ಅನೂಹ್ಯವಾದ ಮತ್ತು ಓದುಗರು ನಿರೀಕ್ಷಿಸಲು ಸಾಧ್ಯವೇ ಇಲ್ಲದಂಥ ತಿರುವೊಂದಕ್ಕೆ ಬಂದಾಗ ಓದುಗ ಒಮ್ಮೆ ಗೆ ದಂಗಾಗಿ ಬಿಡುತ್ತಾನೆ. ಈ ಕಥೆಯನ್ನು ಪ್ರಸ್ತುತ ರಾಜಕೀಯ ಸ್ಥಿತ್ಯಂತರಗಳ ವಿಡಂಬನೆಗೆ ಲೇಖಕರು ಬಳಸಿಕೊಂಡಿದ್ದಾರಾದರೂ ಅದಷ್ಟೇ ಕಥೆಯ ಉದ್ದೇಶವಲ್ಲ ಅದಕ್ಕೂ ಮೀರಿದ ಥ್ರಿಲ್ಲರ್ ಅಂಶಗಳನ್ನು ಕಥೆ ಮುಂದೆ ತನ್ನಲ್ಲಿ ಹುದುಗಿಸಿ ಕೊಂಡಿದೆ. 'ಅದೇ ಧ್ವನಿ' ಕಥೆ ಒಂದು ಕ್ಲಾಸಿಕ್ ಕಥೆಯಾಗಿ ಹೊರಹೊಮ್ಮಿದುದರಲ್ಲಿ ಸಂಶಯವಿಲ್ಲ.ಕಲಾ ಪ್ರೇಮಿಗಳು, ಕಲಾವಿದರು ಮತ್ತು ಕಲಾವಿದರಾಗಬಯಸುವವರು ಓದಲೇ ಬೇಕಾದ ಕಥೆ ಇದು. ಸಂಗೀತ ಅಥವಾ ಯಾವುದೇ ಕಲೆಗೆ ನಾವು ಪ್ರಾಮಾಣಿಕವಾಗಿ ಶರಣಾದಲ್ಲಿ ಮಾತ್ರ ಅದು ನಮ್ಮ ಮೂಲಕ ಪೂರ್ಣ ಪ್ರಮಾಣದಲ್ಲಿ ಬೆಳಗುತ್ತದೆ. ಹಣ, ಪ್ರತಿಷ್ಠೆ,ಮತ್ತು ಹೆಸರು, ಕಲಾಕ್ಷೇತ್ರವನ್ನು ಆವರಿಸಿರುವ ರೀತಿ ಮತ್ತು ಅದರಿಂದ ಕಲೆಯಲ್ಲಿ ಉಂಟಾಗಿರುವ ಯಾಂತ್ರಿಕತೆ ಮತ್ತು ಕೃತಕತೆ ಈ ಕಥೆಯಲ್ಲಿ ಕಂಡುಬರುತ್ತದೆ. ಯಶಸ್ವಿ ಸಂಗೀತಗಾರನಾಗ ಬಯಸುವವನಿಗೆ ಕಿವಿಮಾತೊಂದು ಈ ಕಥೆಯಲ್ಲಿದೆ. 'ನಿ ಹೀ ಸಂ ' ಕಥೆಯು ತೆಳುವಾದ ಹಾಸ್ಯವನ್ನು ಹೊಂದಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ಅನುಭವಿಸಿರಬಹುದಾದ ನಿದ್ರಾ ಹೀನತೆಯು ಧಾವಂತದ ಇಂದಿನ ಜಗತ್ತಿನಲ್ಲಿ ಸದ್ದಿಲ್ಲದೇ ಒಂದು ಪೆಡಂಭೂತವಾಗಿ ವಯಸ್ಸಿನ ಅಂತರವಿಲ್ಲದೆ ಕಾಡುತ್ತಿದೆ ಮತ್ತು ಅದು ಕೆಲವೇ ಕೆಲವರ ಸಮಸ್ಯೆ ಎಂದು ನಿರ್ಲಕ್ಷಿಸುವ ಕಾಲವಿದಲ್ಲ ಎಂಬುವುದನ್ನು ಎತ್ತಿ ತೋರುತ್ತದೆ. ನಿದ್ರಾಹೀನತೆ ಎದುರಿಸುವವರು ಈ ಕಥೆ ಓದಲೇ ಬೇಕು ಎಂದು ಮತ್ತೆ ನೆನಪಿಸುವ ಅಗತ್ಯವಿಲ್ಲ. ತಕ್ಷಕನ ದೋಷ, ಅವಳು, ಅವನು ಮತ್ತು ಕೋಣೆ,ಬಂಗಾರದ ಬಳೆ, ಕೀರ್ತಿ ಟ್ರಾವೆಲ್ಸ್ ಹೀಗೆ ಎಲ್ಲಾ ಕಥೆಗಲ್ಲಿ ಸಹ ಲೇಖಕರ ಓದು, ಅನುಭವ ಸೂಕ್ಷ್ಮತೆ ಮತ್ತು ಅದನ್ನು ಸಾಹಿತ್ಯಿಕ ವಾಗಿ ಅಭಿವ್ಯಕ್ತಿಸುವಲ್ಲಿನ ಚಾತುರ್ಯ ಕಂಡುಬರುತ್ತದೆ.ಲೇಖಕರು ಆರಿಸಿಕೊಳ್ಳುವ ವಸ್ತುವಿನಲ್ಲಿರುವ ನಾವೀನ್ಯತೆ ಇವರ ಪ್ರತೀ ಪುಸ್ತಕದಲ್ಲೂ ಕಾಣಿಸಿಕೊಂಡಿದೆ. "
- ಗಣೇಶ್ ಪ್ರಸಾದ್ ಮಂಜೇಶ್ವರ (ಕವಿ, ಸಾಹಿತಿ)
"Vittal, congratulations in your new book !!!
I have read all the stories in " Hulivesha" within 72 hours of getting the book ..for which I was eagerly waiting. I had already read both your earlier books which i thoroughly enjoyed. I am awed by the originality of your stories and the vivid imagination you have.
Your stories are a mix of slice of life and the exotic serendipity..all woven into an intoxicating cocktail. There also life lessons and insights across the stories as a topping to the main dishes.
Brialliant reads for sure. Wishing you more success in the days to come :-)"
- SN Murthy
"All stories are very well written.. With hold on language, right pace, right characters.
Unique point is that. In all the stories we can relate the character s to ourselves , situations andr known people and hence keeps us engaged closely while reading the book."
- Jagannath
"ವಿಶಿಷ್ಠವಾದ ಕಥೆಗಳ ಸುಂದರ ಹೊತ್ತಗೆ..ತುಂಬಾ ಮೆಚ್ಚುಗೆ ಆಯಿತು.. ಉತ್ಕೃಷ್ಟ ದರ್ಜೆಯ ಪುಸ್ತಕ"
- Geetha Pai
"ವಿಭಿನ್ನವಾದ ಕತೆಗಳು. ಓದಿ ಇಷ್ಟವಾಯಿತು. ರಾಜಕೀಯ, ಧಾರ್ಮಿಕ, ಕಾಲ್ಪನಿಕ, ಹಾಸ್ಯ ಎಲ್ಲದೂ ಬೆರಸಿ ಬರ್ದ ಕಥೆಗಳು"
- Chetana
"Some really excellent stories in this book. I liked "avalu mattu kone' very much. Rest are also good!"
- Dinesh