ಫೋರ್ಡಿ

Posted on: 03 May 2020

Category: Book Review

Blog Views: 1667

 

ಪುಸ್ತಕ: ಫೋರ್ಡಿ

ಲೇಖಕರು: ಗುರುಪಾದ ಬೇಲೂರು

ಪ್ರಕಾಶಕರು: ಮೈ ಲ್ಯಾಂಗ್ ಬುಕ್ಸ್ (ಇ-ಪುಸ್ತಕ, ಪೇಪರ್ ಪುಸ್ತಕದ ಬಗ್ಗೆ ಮಾಹಿತಿ ಇಲ್ಲ!)

 

ಇದು ಮೂರು ಆಯಾಮಗಳ ಈ ಜಗತ್ತಿನಲ್ಲಿ, ನಾಲ್ಕನೆಯ ಆಯಾಮವನ್ನು ಪರಿಚಯಿಸುವ ಒಂದು ಸುಂದರವಾದ ವೈಜ್ಞಾನಿಕ ಕತೆ. ನೇತ್ರಾ ಮತ್ತು ತೇಜಸ್ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ, ಆದರೆ ನೇತ್ರಾಳನ್ನು ಅವಳ ಸೋದರ ಮಾವ ಕಿರಣ್ ಜೊತೆ ವಿವಾಹ ಮಾಡಿಸುವುದು ಪರಿವಾರದಲ್ಲಿ ನಿರ್ಧಾರವಾಗಿರುತ್ತದೆ. ಕಿರಣ್ ತನ್ನ ಅಧಿಕಾರವನ್ನು ನೇತ್ರಾಳ ಮೇಲೆ ಸಾಬೀತು ಪಡಿಸಲು, ನೇತ್ರಾ-ತೇಜಸ್ ಸದಾ ಭೇಟಿ ಕೊಡುವ ಜೋಗದ ಗುಂಡಿಗೆ ಕರೆದೊಯ್ಯುತ್ತಾನೆ. ಆದರೆ ಅಲ್ಲಿ ಅನಿರೀಕ್ಷಿತವಾಗಿ ಕಿರಣ್, ನೇತ್ರಾ ಇಬ್ಬರೂ ಶರಾವತಿಯ ಕಣಿವೆಯಲ್ಲಿ ಬಿದ್ದು ಸಾವನ್ನಪ್ಪುತ್ತಾರೆ. ಇಲ್ಲಿಯ ವರೆಗೆ ತೀರಾ ಸಾಮಾನ್ಯ ಹಾಗೂ ಸಾಂಸಾರಿಕವೆನಿಸಿದ ಈ ಕತೆ ಮುಂದೆ ವೈಜ್ಞಾನಿಕ ತಿರುವು ಪಡೆದು, ಹಲವು ಹೊಸ ವಿಷಯಗಳನ್ನು ಪರಿಚಯಿಸುತ್ತಾ ಒಂದು ವಿಶಿಷ್ಟವಾದ ಅನುಭವಗಳನ್ನೇ ಕೊಡುತ್ತದೆ. ಲೇಖಕರು ಈ ವಿಷಯದ ಮೇಲೆ ನಡೆಸಿದ ಗಾಢವಾದ ಅಧ್ಯಯನ ಎದ್ದು ಕಾಣುತ್ತದೆ. ಹಾಗೆಯೇ 4D, tesseract, Ghost Meter Pro, ಇಲೋನ್ ಮಸ್ಕ್ ರವರ ಕೆಲವು ಸಿದ್ದಾಂತಗಳು ಹೀಗೆ ಹಲವು ವಿಚಾರಗಳ ವಿಶ್ಲೇಷಣೆ ಸಿಗುತ್ತದೆ. ಒಂದೇ ಓದಿಗೆ ಎಲ್ಲವೂ ಅರ್ಥವಾಗುವುದು (ನನಗೆ!) ಕಷ್ಟವಾದರೂ ಕತೆಗೆ ತಕ್ಕಮಟ್ಟಿನ ವಿಷಯಗಳು ಅರ್ಥಗರ್ಭಿತವಾಗಿ ಮೂಡಿದೆ. ಒಮ್ಮೆಮ್ಮೆ ಓದುವಾಗ ಕ್ರಿಸ್ಟೋಫರ್ ನೋಲನ್ ರವರ Interstellar, Inception ನಂತಹ ಸಿನೆಮಾ, ಹಾಗೆಯೇ ಅನುಷ್ ಶೆಟ್ಟಿಯವರ ‘ನೀನು ನಿನ್ನೊಳಗೆ ಖೈದಿ’ ಕತೆಗಳು ನೆನಪಾದವು. ತೇಜಸ್, ನೇತ್ರಾ, ಅನಂತಾಚಾರ್ಯ, ಹಾಲಪ್ಪ, ರಾಹುಲ್ ಪಾತ್ರಗಳೂ ಸೂಕ್ತವಾಗಿ ಕತೆಯಲ್ಲಿ ಬೆಳೆದಿವೆ.

 

ಕನ್ನಡದಲ್ಲಿ ಇಂತಹ ಒಂದೊಳ್ಳೆ ವೈಜ್ಞಾನಿಕ ಕಾದಂಬರಿಯನ್ನು ಬರೆದ ಗುರುಪಾದ ಬೇಲೂರು, ಹಾಗೆಯೇ ಇದನ್ನು ಕರೋನಾ ಕಾಟದ ಲಾಕ್ ಡೌನ್ ನಲ್ಲಿ ಓದಲು ಸಾಧ್ಯ ಮಾಡಿದ ಮೈ ಲ್ಯಾಂಗ್ ಬುಕ್ಸ್ ಗೆ ಅಭಿನಂದನೆಗಳು.

 

ಇಂತಿ,

ವಿಠಲ್ ಶೆಣೈ

 

 

 

Tags: ಕನ್ನಡ ಪುಸ್ತಕ, kannada book review, ಫೋರ್ಡಿ