ಗ್ಯಾಸ್ ಪ್ರಾಬ್ಲಮ್ - ಲಲಿತ ಪ್ರಬಂಧ

Posted on: 29 Sep 2018

Category: Kannada Blog

Blog Views: 2756

 


ಇದು ನನ್ನ ಮೊದಲ ಲಲಿತ ಪ್ರಬಂಧ ಪುಸ್ತಕ "ಪಾರಿವಾಳಗಳು- ಲಲಿತ ಪ್ರಬಂಧಗಳು" ದ ಒಂದು ಲಲಿತ ಪ್ರಬಂಧ. ಈ ತರಹದ 12 ಪ್ರಬಂಧಗಳು ಪುಸ್ತಕದಲ್ಲಿವೆ. ಕೊಳ್ಳಲು:

http://www.vittalshenoy.com/books

http://totalkannada.com/paarivaalagalu--P37107?ver=8292467351

https://www.amazon.in/Paarivaalagalu-Vittal-Shenoy/dp/B07GBYSZP3/


ಗ್ಯಾಸ್ ಪ್ರಾಬ್ಲಮ್

       ವೈಟ್‌ಫೀಲ್ಡ್ ಮತ್ತು ಇಂದಿರಾನಗರಗಳ ಮಧ್ಯ ಇರುವ ದೂರ ೧೩ ಕಿ.ಮೀ. ಆದರೆ ಟ್ರಾಫಿಕ್ ಎಷ್ಟೊಂದು ದಟ್ಟವಾಗಿರುತ್ತದೆ ಅಂದರೆ ಸಾಯಂಕಾಲ ಕಾರಲ್ಲಿ ಹೊರಟರೆ ರಾತ್ರಿ ತಲುಪುವ ಸಾಧ್ಯತೆಗಳೂ ಇವೆ. ಜೀವನದ ಅತ್ಯಮೂಲ್ಯ ಸಂಜೆಗಳನ್ನು ಸ್ಟಿಯರಿಂಗ್ ವ್ಹೀಲ್ ಹಿಂದುಗಡೆ, ಎಫ್. ಎಂ ರೇಡಿಯೋ ಜಾಕಿ ಜತೆ ಪ್ರತಿದಿನ ಕಳೆಯುವುದು ನನಗೆ ಸರಿಯೆನಿಸಲಿಲ್ಲ. ದಿನನಿತ್ಯ ಇದೇ ತರಹ ಗಂಟೆಗಟ್ಟಲೆ ರಸ್ತೆಯಲ್ಲಿ ಕಾಲ ಕಳೆದು ರೋಸಿ ಹೋಗಿದ್ದ ನನಗೆ, ಇದಕ್ಕೊಂದು ಪರಿಹಾರ ಹುಡುಕುವುದು ಅನಿವಾರ್ಯವಾಯಿತು. ವೈಟ್‌ಫೀಲ್ಡಿನಲ್ಲಿದ್ದ ಸ್ವಂತ ಮನೆಯನ್ನು ಬಾಡಿಗೆಗೆ ಕೊಟ್ಟು, ನಾವು ಇಂದಿರಾನಗರಕ್ಕೆ ಬಾಡಿಗೆ ಮನೆಗೆ ಸ್ಥಳಾಂತರ ಮಾಡುವ ನಿರ್ಧಾರ ಮಾಡಬೇಕಾಯಿತು. ಮಕ್ಕಳ ಸ್ಕೂಲ್ ಮತ್ತು ನನ್ನ ಆಫೀಸಿಗೆ ಹತ್ತಿರವಾಗಿ ಇದ್ದ ಬಾಡಿಗೆ ಮನೆಯೊಂದನ್ನು ಹುಡುಕಿ, ಅಲ್ಲಿಗೆ ನಮ್ಮ ವಸತಿ ವರ್ಗಾವಣೆ ಮಾಡುವ ನಿರ್ಧಾರ ತಗೊಂಡೆವು.

       ಮನೆ ಬದಲಾಯಿಸುವಾಗ ಎಲ್ಲಾ ಕಷ್ಟಗಳ ಜೊತೆ ಬರುವ ಒಂದು ದೊಡ್ಡ ಕಷ್ಟವೆಂದರೆ ವಿಳಾಸ ಬದಲಾವಣೆ ಮಾಡುವುದು. ಬ್ಯಾಂಕು, ಕ್ರೆಡಿಟ್ ಕಾರ್ಡ್, ಶಾಲೆ, ಇನ್ಶೂರೆನ್ಸ್ ಪಾಲಿಸಿಗಳು, ಗ್ಯಾಸ್ ಏಜನ್ಸಿ, ವಾರ್ಷಿಕ ಮೈಂಟೆನೆನ್ಸ್ ಒಪ್ಪಂದಗಳು ಇತ್ಯಾದಿ ಈ ಪಟ್ಟಿ ಹನುಮಂತನ ಬಾಲದಂತೆ ಉದ್ದ ಹೋಗುತ್ತದೆ. ಇವೆಲ್ಲಕ್ಕಿಂತ ಅತ್ಯಂತ ಮುಖ್ಯವಾದದ್ದು ಗ್ಯಾಸ್ ಏಜನ್ಸಿಯಲ್ಲಿ ನಮ್ಮ ಗ್ಯಾಸ್ ಸಂಪರ್ಕದ ವಿಳಾಸವನ್ನು ಬದಲಾಯಿಸುವುದು. ಇದು ಹೊಟ್ಟೆ ಪಾಡಿನ ವಿಷಯವಲ್ಲವೇ? ಈ ಕಾರಣದಿಂದ ನಾನು ಮೊದಲು ಗ್ಯಾಸ್ ಏಜನ್ಸಿ ಕಡೆ ದಾಪುಗಾಲು ಹಾಕಿದೆ.

       ಮೊದಲ ಬಾರಿ ಕನೆಕ್ಷನ್ ಪಡೆಯಲು ಹೋಗಿದ್ದ ನಾನು, ಅದಾದ ನಂತರ ಗ್ಯಾಸ್ ಏಜನ್ಸಿ ಕಡೆ ಹೋಗಿರಲಿಲ್ಲ. ವಿಳಾಸ ಕಂಡು ಹಿಡಿದು ಸ್ವಲ್ಪ ಸುತ್ತಾಡಿ ಕೊನೆಗೂ ಏಜನ್ಸಿ ತಲುಪಿದೆ. ಅದು ಎಲ್ಲೋ ಒಂದು ನಿರ್ಜನ ಪ್ರದೇಶದಲ್ಲಿತ್ತು. ಏಜನ್ಸಿಯ ಮುಂಬಾಗಿಲು ಮುಚ್ಚಿತ್ತು. “ಥಥ್ ತೇರಿ” ಅಂತ ವಾಪಸ್ ಹೋಗಲು ಸಿದ್ಧವಾಗುತ್ತಿದ್ದಂತೆ, ಯಾರೋ ಒಬ್ಬರು ಹಿಂದಿನ ಬಾಗಿಲು ತೋರಿಸಿ ಅಲ್ಲಿಂದ ಪ್ರವೇಶ ಎಂದು ತೋರಿಸಿದರು. ಇದು ಒಂದು ಒಳ್ಳೆಯ ಉಪಾಯ ಎಂದೆನಿಸಿತು. ಮುಂಬಾಗಿಲು ಮುಚ್ಚಿ, ಹಿಂಬಾಗಿಲು ಮಾತ್ರ ತೆರೆದು ಬರುವ ಗ್ರಾಹಕರನ್ನು ಹಿಂತಿರುಗಿಸುವ ಇರಾದೆ ಇವರದ್ದು. ಹೀಗಿದ್ದಾಗ ಬಹುಶಃ ಒಳಗಡೆ ಕಮ್ಮಿ ಜನರಿರಬಹುದೆಂದು ಭಾವಿಸಿದರೆ, ಹಿಂಬಾಗಿಲಿನಿಂದ ಒಳಗೆ ಹೊಕ್ಕಾಗ ಅಲ್ಲಿ ಜನರ ಮಹಾಪೂರವೇ ಇತ್ತು. ಇಷ್ಟೊಂದು ಜನ ಊರು ಬಿಟ್ಟು ಹೋಗುತ್ತಿದ್ದಾರಾ? ಅಂತ ಅಚ್ಚರಿ ಪಟ್ಟೆ. ನೋಡಿದರೆ ಆಧಾರ್ ಕಾರ್ಡ್ ಕೊಡಲು ಸುಮಾರು ಜನ ಬಂದು ನೆರೆದಿದ್ದರು. ಸರ್ಕಾರದ ಹೊಸ ನಿಯಮದನ್ವಯ ಎಲ್ಲಾ ಕನೆಕ್ಷನ್‌ಗಳಿಗೆ ಆಧಾರ್ ಕಾರ್ಡ್ ಲಗತ್ತಿಸಿ, ಗ್ಯಾಸಿನ ಸಬ್ಸಿಡಿ ಮತ್ತು ಅನೈತಿಕ ಕನೆಕ್ಷನ್‌ಗಳನ್ನು ಸರಿಪಡಿಸುವ ಉಪಾಯವಿದು. ಇದರ ನೆಪದಲ್ಲಿ ಕ್ಸೆರಾಕ್ಸ್ ಅಂಗಡಿಗಳು, ಏಜಂಟ್‌ಗಳು ಮತ್ತು ಗ್ಯಾಸ್ ಏಜನ್ಸಿಗಳಿಗೆ ದುಡ್ಡು ಮಾಡುವ ಹೊಸ ಅವಕಾಶ.

       ಹದಿನೈದು ನಿಮಿಷ ತಾಳ್ಮೆಯಿಂದ ಲೈನಿನಲ್ಲಿ ನಿಂತು ಕೊನೆಗೂ ನನ್ನ ಸರದಿ ಬಂತು. ಅಲ್ಲಿ ಬರುವವರೆಲ್ಲಾ ಆಧಾರ್ ಕಾರ್ಡ್ ಕೊಡಲು ಬಂದಿದ್ದರಿಂದ ಕೂತಿದ್ದ ಆಫೀಸರ್ ನನ್ನತ್ತ ನೋಡಿ,

       “ಕೊಡಿ ಆಧಾರ್ ಕಾರ್ಡ್,” ಎಂದು ನನ್ನ ಕಡೆ ತಿರಸ್ಕೃತ ಮುಖದಿಂದ ನೋಡಿದ.

       “ಅಡ್ರೆಸ್ ಚೇಂಜ್, ಆಧಾರ್ ಕಾರ್ಡ್ ಅಲ್ಲ,” ಅಂದೆ. ಬೆಳಿಗ್ಗೆಯಿಂದ ಒಂದೇ ಕೆಲಸ ಮಾಡಿ ಕೂತಿದ್ದ ಅವನಿಗೆ ಹೊಸ ಕೆಲಸ ಬಂದದ್ದು ಸ್ವಲ್ಪ ಖುಷಿ ಕೊಟ್ಟಿತ್ತೇನೋ? ನಾನು ಅವನಿಗೆ ಎಲ್ಲಾ ವಿವರಿಸಿದೆ.

       “ಏನ್ ಸಾರ್, ಇಡೀ ಊರಿನ ಜನ ವೈಟ್‌ಫೀಲ್ಡ್ ಗೆ ಬಂದರೆ, ನೀವು ವೈಟ್‌ಫೀಲ್ಡ್ ಬಿಟ್ಟು ಹೋಗುತ್ತಿದ್ದೀರಾ?” ಅಂತ ಕೇಳಿದ.

       “ನಿಮಗೆ ಅರ್ಥವಾಗಲ್ಲ ಬಿಡಿ,” ಅಂದೆ.

       “ನಿಮ್ಮಿಷ್ಟ ಬಿಡಿ, ಇಂದಿರಾನಗರ ತಾನೆ?” ಅಂತ ಮತ್ತೆ ಖಾತ್ರಿ ಪಡಿಸಿದ. ನಾನು ತಲೆ ಅಲ್ಲಾಡಿಸಿ ಹೂಂ ಅಂದೆ.

       “ಅಡ್ರೆಸ್ ಪ್ರೂಫ್ ಇದೆಯಾ?” ಅಂತ ಕೇಳಿದ. ಮತ್ತೆ ಹೂಂ ಅಂತ ತಲೆ ಅಲ್ಲಾಡಿಸಿದೆ.

       “ರೆಗ್ಯೂಲೇಟರ್ ಕೊಡಿ,” ಅಂತ ಕೇಳಿದ. ನಾನು ಅದನ್ನು ತಂದಿರಲಿಲ್ಲ.

       “ರೆಗ್ಯೂಲೇಟರ್ ಯಾಕೆ ಬೇಕು?” ಅಂತ ಮರು ಪ್ರಶ್ನೆ ಹಾಕಿದೆ.

       “ಬೇಕು ಸರ್, ನಾವು ಅದನ್ನು ಚೆಕ್ ಮಾಡಿ ಕೊಡಬೇಕು.”

       “ರೆಗ್ಯೂಲೇಟರ್ ಸರಿಯಾಗಿಯೆ ಇದೆ.” ಅಂತ ಅವನಿಗೆ ಖಾತ್ರಿ ಪಡಿಸಿದೆ.

       “ಸರಿ ಇರುವ ಪ್ರಶ್ನೆ ಅಲ್ಲ ಸಾರ್, ನಮ್ಮ ನಿಯಮಗಳನ್ನು ನಾವು ಪಾಲಿಸಬೇಕು. ದಯವಿಟ್ಟು ರೆಗ್ಯೂಲೇಟರ್ ತನ್ನಿ, ಅದಿಲ್ಲದೇ ಕೆಲಸವಾಗುವುದಿಲ್ಲ.” ಅಂತ ನೆಟ್ಟಗೆ ಹೇಳಿಯೇ ಬಿಟ್ಟ.

       “ನೀವು ಮಿಕ್ಕಿದ ಡಾಕ್ಯೂಮೆಂಟ್ ತಗೊಂಡು ಟ್ರಾನ್ಸ್ ಫರ್ ಶುರು ಮಾಡಿ, ನಾನು ನಾಳೆ ಬಂದು ರೆಗ್ಯೂಲೇಟರ್ ಕೊಡುತ್ತೇನೆ.” ಅಂತ ಹೇಳಿದೆ.

       “ಸಾರ್ ದಯವಿಟ್ಟು ಸಮಯ ವ್ಯರ್ಥ ಮಾಡಬೇಡಿ! ಲೈನ್ ಎಷ್ಟು ದೊಡ್ಡದಿದೆ ನೋಡಿ?” ಅಂತ ತೋರಿಸಿದ. ನಾನು ತಿರುಗಿ ನೋಡಿದರೆ ಆಗಲೇ ತಾಳ್ಮೆ ಕೆಟ್ಟ ಒಂದಿಬ್ಬರು ನನ್ನನ್ನು ಆಚೆ ದಬ್ಬಲು ತಯಾರಿದ್ದಂತೆ ಕಾಣಿಸಿತು. ವಾಚ್ ನೋಡಿ ಸುಮ್ಮನೆ ಜಾಗ ಖಾಲಿ ಮಾಡಿದೆ.

       ಏಜನ್ಸಿ ಬಾಗಿಲು ಮುಚ್ಚಲು ಇನ್ನು ಕೇವಲ ೨೫ ನಿಮಿಷಗಳಿದ್ದವು. ಈ ಕೆಲಸಕ್ಕೆ ಇನ್ನೊಂದು ದಿನ ಬರುವುದು ನನಗೆ ಹಿಡಿಸಲಿಲ್ಲ. ಕೂಡಲೇ ಕಾರಿನಲ್ಲಿ ಜೇಮ್ಸ್ ಬಾಂಡ್ ಚಿತ್ರದ ಕಾರ್ ಚೇಸಿನಂತೆ ಬುರ್ ಬುರ್ ಅಂತ, ಆ ಟ್ರಾಫಿಕಿನಲ್ಲಿ ಮನೆಗೆ ಹೋಗಿ, ರೆಗ್ಯೂಲೇಟರ್ ತಗೊಂಡು ಕೇವಲ ಇಪ್ಪತ್ತು ನಿಮಿಷಗಳಲ್ಲಿ ಮತ್ತೆ ಏಜನ್ಸಿ ಕಡೆ ಬಂದೆ. ಲೈನ್ ಸ್ವಲ್ಪ ಸಣ್ಣದಾಗಿತ್ತು ಮತ್ತು ನಾನು ಮರಳಿ ಬಂದಿದ್ದರಿಂದ ನೇರವಾಗಿ ಆಫೀಸರ್ ಕಡೆ ಹೊರಟೆ. ಅವನು ನನ್ನ ಮುಖ ನೋಡಿ “ಅಲ್ಲಿ ಕೊಡಿ,” ಅಂತ ಬೇರೊಬ್ಬ ಆಫೀಸರ್ ಕಡೆ ತೋರಿಸಿದ.

       ಇನ್ನೊಬ್ಬ ಆಫೀಸರ್ ಬಳಿ ಹೋಗಿ ರೆಗ್ಯೂಲೇಟರ್ ಮತ್ತು ಡಾಕ್ಯೂಮೆಂಟ್ಸ್ ಕೊಟ್ಟೆ. ಅವನು ನೇರವಾಗಿ ರೆಗ್ಯೂಲೇಟರ್ ವಾಪಸ್ ಕೊಟ್ಟು “ಇದು ಬೇಡ,” ಅಂದ.

       “ಅವರು ರೆಗ್ಯೂಲೇಟರ್  ಬೇಕೇಬೇಕು ಅಂತ ಹೇಳಿದ್ದಕ್ಕೆ ಮತ್ತೆ ಮನೆಗೆ ಹೋಗಿ ತಂದಿದ್ದೇನೆ, ನೀವು ಬೇಡ ಅಂತೀರಾ?” ಅಂತ ತಿರುಗಿ ಕೇಳಿದೆ.

       “ಅವರು ಹೇಳಿದ್ದರೆ ಅವರನ್ನೇ ಕೇಳಿ,” ಅಂತ ಅವನು ತನ್ನ ಪಾಡಿಗೆ ಡಾಕ್ಯೂಮೆಂಟ್ಸ್ ಪರಿಶೀಲಿಸಲು ಶುರು ಮಾಡಿದ. ಕಷ್ಟಪಟ್ಟು ಹಾರಿ-ಬಿದ್ದು ತಂದ ರೆಗ್ಯೂಲೇಟರನ್ನು ಅವನ ತಲೆಯ ಮೇಲೆ ಕುಕ್ಕಿಸುವಷ್ಟು ಕೋಪ ನನಗೆ ಬಂತು.

       “ಎಚ್ ಎ ಎಲ್ ೨ ನೇ ಹಂತ, ಇದು ಬಾಲಾಜಿ ಏಜನ್ಸಿಗೆ ಟ್ರಾನ್ಸ್ ಫರ್ ಮಾಡ್ತಾ ಇದ್ದೀನಿ. ಸರಿ ನಾ ಸರ್?” ಅಂತ ನನಗೇ ಕೇಳಿದ.

       “ಅದು ನಿಮಗೆ ಚೆನ್ನಾಗಿ ಗೊತ್ತಿರಬೇಕಲ್ವಾ? ನನ್ನನ್ನು ಯಾಕೆ ಕೇಳ್ತಾ ಇದ್ದೀರಾ?” ಅಂದೆ. ಅವನು ಸ್ವಲ್ಪ ದುರುಗುಟ್ಟಿ ನೋಡಿದ. ಕಂಪ್ಯೂಟರ್ ಮೇಲೆ ಐದು ನಿಮಿಷ ಏನೋ ಕುಟ್ಟಿ,

        “ಸರಿ ಎಲ್ಲಾ ರೆಡಿ ಇದೆ. ನೀವು ನಾಳೆ ಬಾಲಾಜಿ ಏಜನ್ಸಿ ಹೋಗಿ ವಿಚಾರಿಸಿ.” ಅಂದ. ಆಗಲೇ ಟೈಂ ಆಗಿದ್ದುದರಿಂದ, ತನ್ನ ಟೇಬಲ್ ಖಾಲಿ ಮಾಡಿಯೇ ಬಿಟ್ಟ.

       ಕಂಪ್ಯೂಟರ್ ಕ್ಷೇತ್ರದಲ್ಲಿದ್ದ ನನಗೆ ಎಲ್ಲಾ ಕಂಪ್ಯೂಟರೀಕರಣ-ವಾಗಿದ್ದನ್ನು ನೋಡಿ ಹೆಮ್ಮೆ ಅನಿಸಿತು. ಒಂದು ಚೂರು ಕಾಗದ ಉಪಯೋಗಿಸದೇ, ಆನ್‌ಲೈನ್‌ನಲ್ಲಿ ಅರ್ಜಿ ವರ್ಗಾವಣೆ ಮಾಡಿದ್ದು ಕಂಪ್ಯೂಟರ್‌ನ ಸದುಪಯೋಗ ಅನಿಸಿತು.

       ಮರುದಿನ ಬಾಲಾಜಿ ಏಜನ್ಸಿ ಕಡೆ ಹೋದೆ. ಅಲ್ಲಿಯೂ ಕೂಡಾ ತಿರುಪತಿ ಬಾಲಾಜಿ ದರ್ಶನದಂತೆ ಉದ್ದ ಕ್ಯೂ ಇತ್ತು. ಅದೇ ಆಧಾರ್ ಕಾರ್ಡ್ ಹಿಡಿದು ಕೊಂಡು ಜನರೆಲ್ಲಾ ನಾ ಮುಂದು, ತಾ ಮುಂದು ಅಂತ ಒಬ್ಬರನ್ನೊಬ್ಬರು ತಳ್ಳುತ್ತಾ ಇದ್ದರು. ನಾನೂ ಅವರಲ್ಲಿ ತಳ್ಳಿ ನೂಕಿ, ಕೊನೆಗೂ ಕೌಂಟರ್ ತಲುಪಿದಾಗ ವಿಜಯದ ನಗು ಮುಖದಲ್ಲಿ ಮೂಡಿ ಬಂತು.

       “ವೈಟ್‌ಫೀಲ್ಡಿಂದ ಇಲ್ಲಿಗೆ ಕನೆಕ್ಷನ್ ಟ್ರಾನ್ಸ್ ಫರ್,” ಅಂದೆ.

       “ನೀವು ನಾಳೆ ಬನ್ನಿ,” ಅಂತ ಅವನು ಹೇಳಿದ. ನನಗೆ ಅರ್ಥವಾಗಲಿಲ್ಲ.

       “ನಾಳೆ ಏಕೆ? ನಾನು ಆಫೀಸಿಗೆ ರಜೆ ಹಾಕಿ ಬಂದಿದ್ದೇನೆ, ಇವತ್ತೇ ಆಗ್ಬೇಕು ಈ ಕೆಲಸ.” ಅಂತ ಗುಡುಗಿದೆ. ಒಂದು ಕಿವಿಯಲ್ಲಿ ಮೊಬೈಲ್, ಇನ್ನೊಂದಲ್ಲಿ ಲ್ಯಾಂಡ್ ಲೈನ್ ಹಿಡಿದಿದ್ದ ಅವನು,

       “ನಿಮಗಲ್ಲರಿ, ನಾನು ಫೋನಲ್ಲಿ ಮಾತಾಡ್ತಾ ಇರೋದು ಕಾಣ್ಸಿಲ್ವಾ?” ಫೋನಲ್ಲಿ ಮಾತು ಮುಗಿಸಿದ ಮೇಲೆ ಅವನು ನನ್ನತ್ತ ನೋಡಿದ.

       “ಟ್ರಾನ್ಸ್ಫರ್ ಪೇಪರ್ಸ್ ಕೊಡಿ,” ಅಂತ ಕೇಳಿದ.

       “ಯಾವ ಪೇಪರ್? ಎಲ್ಲಾ ಆನ್‌ಲೈನ್ ಮಾಡಿ ಬಿಟ್ಟಿದ್ದಾರೆ ಆ ಏಜನ್ಸಿಯವರು,” ಅಂದೆ. ಅವನು ವಿಚಿತ್ರವಾಗಿ ನನ್ನತ್ತ ನೋಡಿದ.

       “ಅಲ್ಲ ರೀ, ಪೇಪರ್ ತೋರಿಸಿ. ಈ ತರಹ ಪೇಪರ್ ಕೊಟ್ಟಿಲ್ವಾ ಅವರು?" ಅಂತ ತುಂಬಿಸಿದ ಅರ್ಜಿಯೊಂದನ್ನು ತೋರಿಸಿ ಕೇಳಿದ.

       "ಎಲ್ಲಾ ಆನ್‌ಲೈನ್ ಅಂತ ಹೇಳಿದ್ರು ಅವರು," ಅಂದೆ.

       “ಅಲ್ಲರೀ, ಇಲ್ಲಿ ಇಂಟರ್‌ನೆಟ್ಟೂ ಇಲ್ಲ, ಕಂಪ್ಯೂಟರ್ ಒಂದಕ್ಕೊಂದು ಕನೆಕ್ಟೂ ಆಗಿಲ್ಲ, ಇನ್ನೆಂತಹ ಆನ್ ಲೈನು?”

       ಬಹುಶಃ ವೈಟ್‌ಫೀಲ್ಡ್‌ನ ಏಜನ್ಸಿಯವನು ಕಂಪ್ಯೂಟರ್ ಮೇಲೆ ಕೆಲಸ ಮಾಡುವುದೇ ಆನ್ ಲೈನ್ ಅಂತ ತಿಳಿದಿದ್ದನೋ? ಇಂಟರ್ನೆಟ್, ಕ್ಲೌಡ್ ಬಗ್ಗೆ ಗೊತ್ತಿಲ್ಲವೇನೋ? ಅಯ್ಯೋ ಮೋಸ ಹೋದೆನಲ್ಲಾ? ಅಂತ ಬೇಸರವಾಯಿತು.

       “ನೀವು ನಾಳೆ ಬನ್ನಿ,” ಅಂತ ಅವನು ಹೇಳಿದ, ಕಿವಿಯಲ್ಲಿ ಮೊಬೈಲ್ ಫೋನಿನಲ್ಲಿ ಮಾತಾಡುತ್ತಿದ್ದರೂ ನನ್ನ ಮುಖ ನೋಡಿ “ಈ ಸಾರಿ ನಿಮಗೇ ಹೇಳಿದ್ದು,” ಅಂತ ನಕ್ಕ.

       ಮಾರನೇ ದಿನ ಮತ್ತೆ ವೈಟ್‌ಫೀಲ್ಡ್ ಏಜನ್ಸಿಗೆ ಹೋದೆ. ನನ್ನನ್ನು ಕಂಡ ಕೂಡಲೇ ಆ ದಿನ ಸಿಕ್ಕಿದ ಏಜಂಟ್ “ಏನು ಸರ್ ನೀವು? ಆ ದಿನ ಪ್ರಿಂಟೌಟ್ ಕೊಟ್ಟು ವಾಪಸ್ಸು ಬರೋಷ್ಟರಲ್ಲಿ ಓಡಿ ಹೋಗಿದ್ದೀರಾ?” ಅಂತ ಕೇಳಿದ.

       “ನೀವೇ ಅಂದ್ರಲ್ಲಾ? ಎಲ್ಲಾ ಆನ್ ಲೈನ್ ಅಂತ? ನನಗೇನು ಗೊತ್ತು ಪೇಪರ್ ಕೂಡಾ ಬೇಕು ಅಂತ?” ಅಂತ ನನ್ನ ಮುಗ್ಧತೆ ತೋರಿಸಿದೆ.

       “ನಾನು ಹೇಳಿದ್ದು ಏನಂದ್ರೆ ಮುಂಚೆಯೆಲ್ಲಾ ಪೆನ್ನಲ್ಲಿ ಬರೆಯುತ್ತಿದ್ದಿದ್ದು, ಇವಾಗೆಲ್ಲಾ ಕಂಪ್ಯೂಟರಲ್ಲಿ ಎಂದು,” ಅಂತ ತನ್ನ ಡ್ರಾವರಿಂದ ನನ್ನ ಟ್ರಾನ್ಸ್ಫರ್ ಪತ್ರವನ್ನು ಕೊಟ್ಟ. ನಾನು ಎಲ್ಲಾ ಸರಿಯಾಗಿ ನೋಡಿಕೊಂಡು ಮತ್ತೆ ಇಂದಿರಾನಗರದ ಕಡೆ ಹೊರಟೆ. ಆದರೆ ವಿಪರೀತ ಟ್ರಾಫಿಕ್‌ನಲ್ಲಿ ನಾನು ಇಂದಿರಾನಗರ ತಲುಪುವಷ್ಟರಲ್ಲಿ ತುಂಬಾ ತಡವಾಯಿತು. ಮತ್ತೆ ಮಾರನೇ ದಿನಕ್ಕಾಗಿ ಕಾಯುವ ಅವಸ್ಥೆ ಬಂತು.

       ಮರುದಿನ ಸರಿಯಾಗಿ ಒಂಬತ್ತುವರೆ ಗಂಟೆಗೆ ಬಾಲಾಜಿ ಏಜನ್ಸಿ ಮುಂದೆ ಹಾಜರಾದೆ. ಒಳಗಡೆ ಮತ್ತೆ ಅದೇ ತಿರುಪತಿ ಬಾಲಾಜಿ ದರ್ಶನಕ್ಕಿದ್ದಂತೆ ಉದ್ದವಾದ ಕ್ಯೂ ಇತ್ತು. ಹಿರಿಯರು, ಕಿರಿಯರು, ವಯೋವೃಧ್ಧರು ಒಂದಿಷ್ಟು ಪುಟಾಣಿಗಳು, ಎಲ್ಲಾ ತರಹದ ಪ್ರಜೆಗಳು ಅಲ್ಲಿ ನೆರೆದಿದ್ದರು. ಮೂರು ದಿನದಿಂದ ಗ್ಯಾಸ್ ಏಜನ್ಸಿಯಲ್ಲಿ ನೂಕುನುಗ್ಗಲು ನೋಡಿದ್ದ ನನಗೆ, ಈಗ ಅದರಲ್ಲಿ ಹೇಗೆ ತೆವಳಿ, ನುಗ್ಗಿ ಹೋಗಬೇಕಂತ ಗೊತ್ತಾಯಿತು. ಮುಂದಿನವನ ಬೆವರಿನ ವಾಸನೆ, ಹಿಂದಿನವನ ಚಪ್ಪಲಿಯ ತುಳಿತ, ಎಲ್ಲೋ ದೂರದಿಂದ ಬರುತ್ತಿದ್ದ ಹೂಸಿನ ವಾಸನೆ ಯಾವುದನ್ನೂ ಲೆಕ್ಕಿಸದೇ ನನ್ನ ಸರದಿಯನ್ನು ನಿರೀಕ್ಷಿಸುತ್ತಿದ್ದೆ.

       ಎರಡನೇ ಸಲ ನನ್ನ ಮುಖ ನೋಡಿದ ಏಜಂಟ್ ನನ್ನ ಹತ್ತಿರ ಇದ್ದ ಎಲ್ಲ ಡಾಕ್ಯುಮೆಂಟ್ ನೋಡಿದ. ಇದಕ್ಕಿದ್ದಂತೆ “ಏನ್ ಸಾರ್ ಇದು?” ಅಂತ ಕೇಳಿದ.

       “ಈಗ ಏನಾಯ್ತಪ್ಪ?” ಅಂತ ಭಯದಿಂದ ಕೇಳಿದೆ.

       “೧೪ ನೇ ಕ್ರಾಸಲ್ಲಾ ಮನೆ? ಅಲ್ಲಿಗೆ ನಾವು ಸಪ್ಲೈ ಮಾಡಲ್ಲ! ನಾವು ೧೩ನೇ ಕ್ರಾಸ್ ತನಕ ಮಾತ್ರ ಕೊಡೋದು,” ಅಂತ ತಲೆ ಪೆನ್ನಿಂದ ಕೆರಿಸಿಕೊಂಡು ಹೇಳಿದ. ಅವನ ತಲೆಯ ಮೇಲಿನ ಒಂದಿಷ್ಟು ಹೊಟ್ಟುಗಳು ನನ್ನ ಕಾಗದದ ಮೇಲೆ ಬಿದ್ದವು.

       “ಪರ್ವಾಗಿಲ್ಲಪ್ಪ. ನೀವು ೧೩ನೇ ಕ್ರಾಸ್ ಬಂದು ನನಗೆ ಕಾಲ್ ಮಾಡಿ, ನಾನು ಪಕ್ಕದ ಕ್ರಾಸಿಂದ ಬಂದು ಸಿಲಿಂಡರ್ ಡೆಲಿವರಿ ತಗೊಳ್ಳುತ್ತೇನೆ,” ಅಂದೆ.

       “ಭಾರೀ ಜೋಕ್ ಮಾಡ್ತೀರಾ! ನೀವು ಬಿಟ್ರೆ ನಾನು ನಿಮ್ಮೇಲೆನೇ ದಿನಪೂರ್ತಿ ತಮಾಷೆ ಮಾಡಬಹುದು ಗೊತ್ತಾ?” ಅಂತ ಸ್ವಲ್ಪ ಗಂಭೀರವಾಗಿ ಕೇಳಿದ.

       “ಅಲ್ಲ ರೀ, ನನಗೆ ಹೇಗೆ ಗೊತ್ತಾಗತ್ತೆ? ಯಾವ ಕ್ರಾಸ್ ಯಾವ ಏಜನ್ಸೀದು ಅಂತ? ವೈಟ್‌ಫೀಲ್ಡ್ ಏಜನ್ಸಿಯಲ್ಲಿ ನಾನು ಸರಿಯಾದ ಅಡ್ರೆಸ್ ಕೊಟ್ಟಿದ್ದೀನಲ್ಲಾ? ಯಾಕೆ ಹೀಗೆ ಆಡ್ತೀರಾ?” ಅಂತ ನಾನೂ ಸ್ವಲ್ಪ ಸಿರಿಯಸ್ ಆದೆ. ಅಕ್ಕ ಪಕ್ಕದವರು ನನ್ನತ್ತ ನೋಡಲು ಶುರು ಮಾಡಿದರು.

       “ಅವರಿಗೆ ಹೇಗೆ ಗೊತ್ತಾಗತ್ತೆ? ನೀವು ಹೊಸ ಮನೆಗೆ ಹೋಗಿ, ಅಕ್ಕ ಪಕ್ಕದ ಮನೆಯವರ ಬಾಗಿಲು ತಟ್ಟಿ ಕೇಳಬೇಕು, ಯಾವ ಗ್ಯಾಸ್ ಯಾವ ಏಜನ್ಸಿ ಅಂತ?”

       “ಪಕ್ಕದ ಮನೆಯವರ ಬಾಗಿಲು ತಟ್ಟುವುದಾ? ನೀವು ಯಾವ ಜಮಾನಾದಲ್ಲಿ ಇದ್ದೀರಿ ಸಾಹೆಬ್ರೆ? ಈಗಿನ ಕಾಲದಲ್ಲಿ ಅಕ್ಕ ಪಕ್ಕದ ಮನೆಯವರತ್ರ ಯಾರು ಮಾತಾಡ್ತಾರೆ? ನಮ್ ಪಾಡಿಗೆ ನಾವು ಇರ್ತಿವಿ ವಿನಹಃ ನಿಮ್ಮ ಮನೆಯಲ್ಲಿ ಗ್ಯಾಸ್ ಯಾವುದು? ಅಡುಗೆ ಯಾವುದು? ಕೇಬಲ್ ಯಾವುದು? ಅಂತ ತಲೆಹರಟೆ ಮಾಡಿಕೊಂಡು ಇರಲಿಕ್ಕಾಗ್ತದಾ?” ಅಂತ ನಾನು ಹೇಳಿದಾಗ ನನ್ನ ಹಿಂದೆ ಇದ್ದವರು ಹೂಂ ಅನ್ನುತ್ತಾ ತಲೆ ಅಲ್ಲಾಡಿಸಿ ನಕ್ಕು ಬಿಟ್ರು.

       “ಈಗ ತಲೆಹರಟೆ ನೀವು ಮಾಡ್ತಾ ಇದ್ದೀರಾ, ತಗೊಳ್ಳಿ ಈ ಫಾರಂ ಫಿಲ್ ಮಾಡಿ,” ಅಂತ ನನ್ನ ಕಡೆ ಒಂದು ಫಾರಂ ಎಸೆದ. ನಾನು ಅದನ್ನು ಎತ್ತಿ ಏನಂತ ಓದಿದೆ.

       “ಮತ್ತೆ ಟ್ರಾನ್ಸ್‌ಫರಾ? ಏನ್ರೀ ಇದು? ಇಲ್ಲೇ ಅಡ್ಜಸ್ಟ್ ಮಾಡಕ್ಕಾಗಲ್ವಾ? ಒಂದು ರೋಡ್ ಆಚೆ ಇಚೆ ತಾನೆ?” ಅಂತ ತರ್ಕಿಸಿದೆ.

       “ನಿಮ್ಮನೆಗೆ ಯಾರೋ ಅಪರಿಚಿತರು ಪಕ್ಕದ ಕ್ರಾಸಿನ ಮನೆ ಅಡ್ರೆಸ್ ಕೇಳ್ಕೊಂಡು ಬಂದ್ರೆ, ನೀವು ಪರವಾಗಿಲ್ಲ ಪಕ್ಕದ ರೋಡ್ ತಾನೆ? ನೀವು ಇದೇ ಮನೆಲಿ ಇರಿ ಅಂತ ಚಹಾ-ತಿಂಡಿ ಕೊಡ್ತೀರಾ ಅವರಿಗೆ?” ಅಂತ ಮೊಂಡಾದ ವಾದವನ್ನು ಅವನು ಮಾಡಿದ. ಅವನ ಉದಾಹರಣೆ ಏನಂತ? ನನಗೆ ಅರ್ಥವಾಗಿಲ್ಲ ಆದ್ರೆ ಅವನು ನಗುತ್ತಾ ಇದ್ದ.

       ಕೈಯಲ್ಲಿ ಹಿಡಿದಿದ್ದ ಅರ್ಜಿ ತುಂಬಿಸಲು ಪಕ್ಕಕ್ಕೆ ಹೋದೆ. ಆ ದಿನ ನಾನು ಪೆನ್ ತಂದಿರಲಿಲ್ಲ. ಸ್ವಲ್ಪ ಆಚೆ ಹೋದಾಗ ಒಬ್ಬ ವಯಸ್ಸಾದ ಅಂಕಲ್ ಜೇಬಲ್ಲಿ ಎರಡು ಪೆನ್‌ಗಳು ಕಂಡವು. “ಅಂಕಲ್ ಪೆನ್,” ಅಂತ ಸಂಕೋಚ ಪಟ್ಟು ಕೇಳಿದೆ. ಅವರು ನಗುತ್ತಾ ಪೆನ್ ಕೊಟ್ಟರು. ನಾನು ಬರೆಯಲು ಶುರು ಮಾಡಿದ ಕೂಡಲೇ, ಆ ಅಂಕಲ್ “ಈಗಿನ್ ಕಾಲದ ಹುಡುಗರ ಹತ್ತಿರ ಒಂದು ಮನೆ, ಮೂರು ಸೈಟು, ಎರಡು ಕಾರ್ ಇರ್ತಾವೆ, ಆದ್ರೆ ಜೋಬಲ್ಲಿ ಒಂದು ಪೆನ್ ಇರೋದಿಲ್ಲ,” ಅಂತ ಪಕ್ಕದವರ ಹತ್ರ ವ್ಯಂಗ್ಯ ಮಾಡಿದ್ದು ನನ್ನ ಕಿವಿಯ ಮೇಲೆ ಬಿತ್ತು. ನಾನು ಎಲ್ಲಾ ಫಿಲ್ ಮಾಡಿ ಮತ್ತೆ ಗುಮಾಸ್ತನ ಬಳಿ ಹೋದೆ. ಅವನು ಅರ್ಜಿ ತಗೊಂಡು ಕಂಪ್ಯೂಟರ್‌ನಲ್ಲಿ ನೋಡಿ,

       “ನಿಮ್ಮ ಅಡ್ರೆಸ್‌ ಪ್ರಕಾರ ವಿಜಯಾ ಏಜನ್ಸಿಗೆ ಟ್ರಾನ್ಸ್‌ಫರ್ ಮಾಡ್ತಾ ಇದ್ದೀನಿ, ಸರಿನಾ?” ಅಂತ ಕೇಳಿದ.

       “ನನಗೆ ಏನು ಗೊತ್ತು? ಬೇಕಿದ್ರೆ ಪಕ್ಕದ ಮನೆಯ ಬಾಗಿಲು ತಟ್ಟಿ ಕೇಳಲಾ?” ಅಂತ ಅವನ ಮಾತು ಅವನಿಗೆ ಹೊಡೆದೆ. ಅವನು ಲೆಕ್ಕಿಸದೇ ಕಂಪ್ಯೂಟರ್ ಮೇಲೆ ಇನ್ನೇನೋ ನೋಡುತ್ತಾ,

       “ಆಯ್ಯಯ್ಯೋ, ನೀವು  K.Y.C  ಕೊಟ್ಟಿಲ್ವಾ?” ಅಂತ ಕೇಳಿದ.

       “ಅಂದ್ರೆ?  Know your customer?” ಅವನು ಹೂಂ ಅನ್ನುವಷ್ಟರಲ್ಲಿ, “ಇನ್ನೇನು ತಿಳ್ಕೋಳ್ಳೋದು? ನಾನು ಯಾವ ತರಹ ತರ್ಲೆ ಅಂತ ಗೊತ್ತಾಯ್ತಲ್ಲ? ನೋ ಯುವರ್ ಕಸ್ಟಮರ್ ಯಾಕೆ?” ಅಂದೆ.

       “ರೀ ನೀವು ಇಷ್ಟು ತಲೆಹರಟೆ ಮಾಡಿದ್ದಕ್ಕೆ ನೋಡಿ ನಿಮ್ ಕೆಲ್ಸ ನೆಟ್ಟಗಾಗಿ ನಡೀತಾ ಇಲ್ಲ, ಈ ಫಾರಂ ಸುಮ್ನೆ ಫಿಲ್ ಮಾಡಿ. ಮೊದಲು ಕೆ ವೈ ಸಿ, ಆಮೇಲೆ ಟ್ರಾನ್ಸ್ಫರ್,” ಅಂತ ನನ್ನ ಕೈಯಲ್ಲಿ ಇನ್ನೊಂದು ಫಾರಂ ಕೊಟ್ಟ. ಕಳೆದ ಎರಡು ದಿನಗಳಲ್ಲಿ ಫಾರಂ ಫಿಲ್ ಮಾಡಿ ಮಾಡಿ ನನ್ನ ಕೈ ನೋಯಲು ಶುರುವಾಯಿತು. ಪೆನ್ನೇ ಜಾಸ್ತಿ ಮುಟ್ಟದ ಸಾಫ್ಟ್‌ವೇರ್ ಜನಾಂಗದ ನಾನು ಒಂದೇ ಸಲ ಪೇಜುಗಟ್ಟಲೆ ಬರೆಯುವ ಸ್ಥಿತಿ ಬಂತು! ನಾನು ಪೆನ್ ಆಗಲೇ ಅಂಕಲ್‌ಗೆ ಹಿಂತಿರುಗಿಸಿ ಆಗಿತ್ತು, ಮತ್ತೆ ಅವರ ಹತ್ತಿರ ಕೇಳಲು ಮನಸ್ಸು ಬರಲಿಲ್ಲ. ಹೊರಗಡೆ ಅಂಗಡಿಯಲ್ಲಿ ಪೆನ್ ತಗೊಂಡು ಫಾರಂ ತುಂಬಿಸಿ ಅದನ್ನು ಮತ್ತೆ ಆ ಏಜಂಟ್‌ಗೆ ಕೊಟ್ಟೆ. ಅವನು ಅದನ್ನು ನೇರವಾಗಿ ಆಚೆ ಎಸೆದು “ಎರಡು ದಿನ ಬಿಟ್ಟು ಬನ್ನಿ,” ಅಂದು ತನ್ನ ಕೆಲಸ ಮುಂದುವರಿಸಿದ. ಅವನು ಫಾರಂ ಎಸೆದದ್ದು ನೋಡಿ, ಶಾಲೆಯಲ್ಲಿ ಹೋಂ ವರ್ಕ್ ಸರಿಯಿಲ್ಲ ಅಂತ ಪುಸ್ತಕ ಬಿಸಾಕಿದ ಮೇಸ್ಟರು ನೆನಪಿಗೆ ಬಂದರು.

       “ಎರಡು ದಿನನಾ? ಸ್ವಲ್ಪ ಬೇಗ ಆಗಲ್ವಾ?” ನಾನು ಬಿಡಲು ತಯಾರಿರಲಿಲ್ಲ.

       “ಹೆಡ್ ಆಫೀಸಿಗೆ ಹೋಗಿ ಸೀಲ್ ಹೊಡೆದು ವಾಪಸ್ ಬರೋದಕ್ಕೆ ಎರಡು-ಮೂರು ದಿನ ಆಗತ್ತೆ.”

       “ಹೆಡ್ ಆಫೀಸಿಗೆ ನಾನೇ ಹೋಗಿ ಸೀಲ್ ಹಾಕಿಸಿ ಬರ್ಲಾ?” ಅಂತ ನಾನು ಕೇಳಿದ್ದೇ ತಡ ಅವನು ದುರುಗುಟ್ಟಿ ನನ್ನನ್ನು ನೋಡಿದ.

       “ಎರಡು ದಿನ ಬಿಟ್ಟು ಬರ್ಲಾ? ಇಲ್ಲಾ ಮೂರು ದಿನನಾ?” ಅಂತ ಕೇಳಿ ನಾನು ಸೋಲೊಪ್ಪಿದೆ.

       ಗ್ಯಾಸಿನ ಈ ಅವಸ್ಥೆಯಿಂದ ಈಗಾಗಲೇ ಆಫೀಸಿಗೆ ಎರಡು ದಿನದಿಂದ ತಡವಾಗಿ ಹೋಗಿದ್ದು ನನ್ನ ಬಾಸ್‌ಗೆ ಗೊತ್ತಾಗಿತ್ತು. ಮೂರನೇ ದಿನವೂ ತಡವಾಗಿ ಹೋಗಿದ್ದಾಗ ಬಾಸ್ ಏನೆಂದು? ಕೇಳುವ ಮುಂಚೆಯೇ,

       “ಗ್ಯಾಸ್ ಪ್ರಾಬ್ಲಂ ಬಾಸ್,” ಅಂತ ಹೇಳಿದೆ.

       “ಓಹ್! ನನಗೂ ಹಾಗೆಯೇ! ಆ ಕ್ಯಾಂಟೀನ್ ಕೆಟರರ್ ಚೇಂಜ್ ಆಗಿದ್ದ ದಿನದಿಂದ ಹೀಗೆ. ದಿನಕ್ಕೆ ಮೂರು ನಾಲ್ಕು ಸಲ ಟಾಯ್ಲೆಟ್,” ಅಂತ ತನ್ನ ಸಮಸ್ಯೆ ಹೇಳಿದ.

       “ಇದು ಬೇರೆ ತರಹ ಗ್ಯಾಸ್ ಪ್ರಾಬ್ಲಂ ಬಾಸ್,” ಅಂತ ನಾನು ಅವರಿಗೆ ನಡೆದ ವಿಷಯವನ್ನೆಲ್ಲಾ ಹೇಳಿದೆ. ಕೇಳಿ ನಕ್ಕೇ ಬಿಟ್ಟರು. ನಮ್ಮ ಬಳಿ ಇದ್ದ ಗ್ಯಾಸ್ ಕೂಡ ಸುಮಾರಾಗಿ ಖಾಲಿ ಆಗುತ್ತಾ ಬಂದಿದ್ದರಿಂದ, ನಾವು ಶನಿವಾರ, ಭಾನುವಾರ ಹೋಟೆಲ್‌ನಲ್ಲಿ ತಿನ್ನಲು ಶುರು ಮಾಡಿದೆವು. ನಮ್ಮ ಪುಣ್ಯಕ್ಕೆ ಒಂದೆರಡು ಬರ್ತ್ ಡೇ ಪಾರ್ಟಿಗಳು ಕೂಡಾ ಇದ್ದುದರಿಂದ ಒಂದು ಹೊತ್ತಿನ ಊಟ ಅಲ್ಲಿ ಅಡ್ಜಸ್ಟ್ ಆಯ್ತು. ಪಕ್ಕದ ದರ್ಶಿನಿ, ದೂರದ ನಾರ್ತ್ ಇಂಡಿಯನ್ ರೆಸ್ಟೋರೆಂಟ್, ಕೇರಳ ಮೆಸ್, ಪೀಡ್ಜಾ ಹಟ್ ಅಂತ ಎಲ್ಲಾ ತರಹದ ತಿಂಡಿ ಸೇವನೆ ಮಾಡಿ, ಸೋಮವಾರ ಬಂದಾಗ ನಿಜವಾಗಲೂ ಹೊಟ್ಟೆ ಕೆಟ್ಟು ಗ್ಯಾಸ್ಟ್ರಿಕ್ ಪ್ರಾಬ್ಲಂ ಬಂದು ಬಿಡ್ತು. ಬಾಸ್‌ಗೆ ಫೋನಾಯಿಸಿ “ಬಾಸ್, ಈವಾಗ ನಿಜವಾದ ಗ್ಯಾಸ್ ಪ್ರಾಬ್ಲಂ,” ಅಂತ ಕಷ್ಟಪಟ್ಟು ನಕ್ಕು ಹೇಳಿದೆ. ಅಂತೂ ಒಂದು ಗ್ಯಾಸ್ ಪ್ರಾಬ್ಲಂ ಇನ್ನೊಂದು ಗ್ಯಾಸ್ ಪ್ರಾಬ್ಲಂಗೆ ದಾರಿ ಮಾಡಿತು.

       ಮೂರು ದಿನ ಬಿಟ್ಟು ಮತ್ತೆ ಏಜನ್ಸಿ ಕಡೆ ಹೋದಾಗ ಅಲ್ಲಿ ಬಾಗಿಲು ಮುಚ್ಚಿತ್ತು. ಎರಡನೇ ಶನಿವಾರ, ಬಸವ ಜಯಂತಿ, ಭೀಮನ ಅಮಾವಾಸ್ಯೆ ಇದ್ಯಾವುದೂ ಇಲ್ಲದಿದ್ದರೂ ಯಾಕಪ್ಪಾ ರಜೆ? ಅಂತ ಯೋಚಿಸಲಾರಂಭಿಸಿದೆ. “ಸಾಫ್ಟ್ವೇರ್ ಕೆಟ್ಟು ಹೋಯ್ತು ಸರ್, ಅವರು ಸರಿ ಮಾಡುತ್ತಾ ಇದ್ದಾರೆ. ನಾಳೆ ರೆಡಿ ಆಗುತ್ತಂತೆ. ಈ ಕಂಪ್ಯೂಟರ್‌ಗಳು ಹಿಂಗೆ. ಸರಿಯಾಗಿದ್ದರೆ ಕೆಲ್ಸ ಚೆನ್ನಾಗಿ ಮಾಡ್ತಾವೆ. ಒಂದು ಚೂರು ಆಚೆ-ಈಚೆ ಆದ್ರೆ ಎಲ್ಲಾ ಅಸ್ತವ್ಯಸ್ಥ ಮಾಡಿ ಬಿಡುತ್ತವೆ.” ಅಂತ ಅದೇ ಏಜಂಟ್ ತನ್ನ ಉಪದೇಶ ನನಗೆ ಹೇಳಿದ. ಇನ್ನೆರಡು ದಿನ ಕಳೆದ ಮೇಲೆ ಮತ್ತೆ ಏಜನ್ಸಿಗೆ ಹೋದಾಗ ಅವರು ಕೆ ವೈ ಸಿ ಮುಗಿಸಿ ನನ್ನ ಕನೆಕ್ಷನ್ ಟ್ರಾನ್ಸ್ಫರ್ ಶುರು ಮಾಡಿದರು. ಇನ್ನು ಮೂರು ದಿನ ಮುಗಿದಾಗ ನಮ್ಮ ಕನೆಕ್ಷನ್ ದೊಮ್ಮಲೂರಿನ ಸರಿಯಾದ ಏಜನ್ಸಿಗೆ ಟ್ರಾನ್ಸ್ಫರ್ ಆಯಿತು. ಸದ್ಯಕ್ಕೆ ಎಲ್ಲಾ ಸರಿಯಾಯಿತು ಅನ್ನುವಷ್ಟರಲ್ಲಿ ಇನ್ನೊಂದು ಸಮಸ್ಯೆ ಹುಟ್ಟಿತು. ಹೊಸ ಸಿಲಿಂಡರ್ ಬುಕ್ ಮಾಡಲು ಅವರು ಕೊಟ್ಟ ಐವಿಆರ್ ಫೋನ್ ನಂಬರಲ್ಲಿ ನಮ್ಮ ಬಳಕೆದಾರರ ಸಂಖ್ಯೆ ಕೆಲಸ ಮಾಡುತ್ತಿರಲಿಲ್ಲ. ನಮ್ಮ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಕೊನೆಯುಸಿರು ಎಳೆಯುವುದಕ್ಕೆ ಸಿದ್ಧವಾಗಿತ್ತು.

       “ನಿಮ್ಮ ಕನ್ಸ್ಯೂಮರ್ ನಂಬರ್ ನಮ್ಮ ಏಜನ್ಸಿಗೆ ಲಿಂಕ್ ಆಗಲು ಮೂರು ದಿನ ಬೇಕಾಗತ್ತೆ,” ಅಂತ ನಮ್ಮ ಹೊಸ ಏಜಂಟ್ ಅಂದಾಗ ನನಗೆ ಕಣ್ಣು ಕತ್ತಲೆ ಬರುವುದು ಬಾಕಿ. ದಿನಾ ರಾತ್ರಿ ಗ್ಯಾಸ್ ಮುಗಿದು ಅಡುಗೆ ಮಾಡಲಾರದೇ ಮಕ್ಕಳು ಶಾಲೆಗೆ ರಜೆ ಹಾಕಿದ್ದು, ಮನೆಯಲ್ಲಿ ನೆಂಟರಿಗೆ ಊಟಕ್ಕೆ ಅಡುಗೆ ಮಾಡುವಾಗ ಮಧ್ಯದಲ್ಲೇ ಗ್ಯಾಸ್ ಖಾಲಿಯಾದದ್ದು, ಅಂತ ವಿಧವಿಧವಾದ ಕನಸುಗಳು ಬರಲಾರಂಭಿಸಿದವು. ನಾವು ಹೊಸ ಮನೆಗೆ ಬಂದು ಮೂರು ವಾರ ಕಳೆದಿತ್ತು. ಕೊನೆಗೂ ಒಂದು ದಿನ ದೊಮ್ಮಲೂರಿನ ಏಜನ್ಸಿಯವರ ಬಳಿ ನನ್ನ ಕಷ್ಟವನ್ನೆಲ್ಲಾ ಬಾಯಿ ಬಿಟ್ಟು ಹೇಳಿದೆ. ಯಾರೋ ಒಳ್ಳೆಯ ವ್ಯಕ್ತಿ ಈ ಬಾರಿ ಸಿಕ್ಕಿದ್ದರಿಂದ, ಎರಡೇ ದಿನದಲ್ಲಿ ನಮಗೆ ಹೊಸ ಸಿಲಿಂಡರ್ ಬರುವ ಹಾಗೆ ಮಾಡಿ ಕೊಟ್ಟರು. ಕಾಕತಾಳೀಯವೆಂದರೆ, ಹೊಸ ಸಿಲಿಂಡರ್ ಬಂದ ಒಂದು ಗಂಟೆಯೊಳಗೆ ನಮ್ಮ ಹಳೇ ಸಿಲಿಂಡರ್ ಖಾಲಿಯಾಯಿತು. ಕೊನೆಯ ಬಾಲ್‌ನಲ್ಲಿ ಸಿಕ್ಸರ್ ಹೊಡೆದು ಗೆದ್ದ ಕ್ರಿಕೆಟ್ ಪಂದ್ಯದಂತೆ ನನಗೆ ಅನುಭವವಾಯಿತು.

       ಎಲ್ಲಾ ಸರಿ ಹೋದ ಮೇಲೆ ಒಂದು  ಭಾನುವಾರ ಮನೆಯ ಬಾಗಿಲು ಯಾರೋ ತಟ್ಟಿದರು. ಬಾಗಿಲು ತೆರೆದು ನೋಡಿದರೆ ಅಪರಿಚಿತ ವ್ಯಕ್ತಿಯೊಬ್ಬ “ಅಂಕಲ್, ನಾನು ಇಲ್ಲಿ ಹೊಸದಾಗಿ ಇವತ್ತು ಶಿಫ್ಟ್ ಆಗಿದ್ದೇನೆ, ನಿಮಗೆ ಇಲ್ಲಿ ಯಾವ ಏಜನ್ಸಿ ಗ್ಯಾಸ್ ಸಪ್ಲೈ ಮಾಡತ್ತೆ ಗೊತ್ತಾ?” ಅಂತ ಕೇಳಿದ. ನನಗೆ ನಗು ತಡೆಯಲಾಗಲಿಲ್ಲ. ಆ ವ್ಯಕ್ತಿ ತುಂಬಾ ಮುಜುಗರದಿಂದ ನನ್ನತ್ತ ನೋಡಿದ. “ಒಳಗೆ ಬನ್ನಿ, ಎಲ್ಲಾ ಹೇಳುತ್ತೇನೆ” ಅಂತ ಅವನನ್ನು ಕುಳ್ಳಿರಿಸಿದೆ.

Tags: ಪಾರಿವಾಳಗಳು, ಲಲಿತ ಪ್ರಬಂಧಗಳು