ಸಮಯ ಎಲ್ಲಿದೆ?

Posted on: 27 Oct 2018

Category: Kannada Blog

Blog Views: 2557

    ನನ್ನ ಪುಸ್ತಕಗಳು “ಪಾರಿವಾಳಗಳು” ಮತ್ತು “ತಾಳಿಕೋಟೆಯ ಕದನದಲ್ಲಿ” ನಿಧಾನವಾಗಿ ಹಲವು ಓದುಗರ ಕೈ ಸೇರುತ್ತಿವೆ. ಈ ಬೆಳವಣಿಗೆಯ ಒಂದು ಸಪರಿಣಾಮವೇನೆಂದರೆ ಹೊಸ ವ್ಯಕ್ತಿಗಳ ಪರಿಚಯ. ಯಾರಾದರೂ ಪುಸ್ತಕ ಕೊಂಡಿದ್ದಾರೆ,  ಓದುತ್ತಿದ್ದಾರೆ ಎಂದು ತಿಳಿದಾಕ್ಷಣ ನಾನು ಅವರನ್ನು ಸಂಪರ್ಕಿಸಿ ಪುಸ್ತಕದ ಬಗ್ಗೆ ಅವರ ಅಭಿಪ್ರಾಯ ಕೇಳುತ್ತೇನೆ. ಸದ್ಯಕ್ಕಂತೂ ಇದು ನನಗೆ ಅತ್ಯಗತ್ಯ. ಓದುಗನೆಂಬ ದೇವರು, ಪುಸ್ತಕಗಳಲ್ಲಿ ಏನು ಕಂಡಿದ್ದಾನೆ? ಯಾವ ಅಂಶಗಳು ಓದುಗನಿಗೆ ಹಿಡಿಸಿವೆ? ಎಲ್ಲಿ ತಪ್ಪಾಗಿದೆ? ಎಲ್ಲಿ ಅಂಶಗಳನ್ನು ಸರಿಪಡಿಸಬಹುದಿತ್ತು? ಇದು ಹೀಗಿದ್ದರೆ ಸರಿಯಿತ್ತು, ಅದು ಹಾಗಿದ್ದರೆ ನಿಮಗೆ ಏನು ಅನಿಸುತ್ತದೆ ? ಹೀಗೆ ಹತ್ತು ಹಲವಾರು ಪ್ರತಿಕ್ರಿಯೆಗಳು ಬಂದಾಗ, ಅವು ಲೇಖಕನು ಮುಂದಿನ ಬರಹದಲ್ಲಿ ಏನು ಕಲಿಯಬಹುದು? ಒಳ್ಳೆಯ ಅಂಶಗಳನ್ನು ಮುಂದೆ ಹೇಗೆ ಇನ್ನಷ್ಟು ಬಲಪಡಿಸಬಹುದು? ಇತ್ಯಾದಿ ಹಲವು ವಿಧಗಳಲ್ಲಿ ಸಹಕಾರಿಯಾಗುತ್ತದೆ.  ನನ್ನ ಪುಸ್ತಕಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

       ಇವೆಲ್ಲದರ ನಡುವೆ ಹಲವರು ಕೇಳುವ ಪ್ರಶ್ನೆ “ನಿಮಗೆ ಬರೆಯಲು ಸಮಯ ಎಲ್ಲಿದೆ?”, “ನೀವು ಕೆಲಸ ಬಿಟ್ಟಿರಾ?”, “IT ಕಂಪನಿಯಲ್ಲಿ ಕೆಲಸ ಮಾಡಿಯೂ ಬರೆಯಲು ಸಮಯ ಸಿಗುತ್ತದೆಯಾ?” ಎಂಬ ಪ್ರಶ್ನೆಗಳನ್ನು ಇಟ್ಟಿದ್ದಾರೆ. ಕೆಲಸ ಬಿಟ್ಟು ಸಾಹಿತ್ಯ ಬರೆಯುವುದು ಸದ್ಯಕ್ಕೆ ನನ್ನ ಪಾಲಿಗೆ ಮೂರ್ಖತನದ ಮಾತು. ಸಾಹಿತ್ಯವನ್ನು ಬರೆದು ಸಂಸಾರದ ಆರ್ಥಿಕ ಬೇಡಿಕೆಗಳನ್ನು ಸರಿದೂಗಿಸುವುದು ಕೇವಲ ನುರಿತ ಅಥವಾ ಸುಪ್ರಸಿದ್ಧ ಲೇಖಕರಿಗೆ ಮಾತ್ರ ಸಾಧ್ಯ. ಇನ್ನುಳಿದ ಎಲ್ಲರಿಗೂ ಬರವಣಿಗೆ ಒಂದು ಪ್ರವೃತ್ತಿ, ಅಷ್ಟೇ. ನಾನು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಇಂತಹ ಪ್ರವೃತ್ತಿಗಳಿಗೆ, work-life balanceಗೆ ಅತಿಯಾದ ಪ್ರಾಮುಖ್ಯತೆ ಇದೆ. ಎರಡೂ ಪುಸ್ತಕಗಳನ್ನು ಅವರ ಅಪ್ಪಣೆ ಪಡೆದೇ ಪ್ರಕಟಿಸಿರುವುದು. ಆದುದರಿಂದ ನನ್ನ ಕಂಪನಿಗೆ ನಾನು ಚಿರಋಣಿಯಾಗಿದ್ದೇನೆ. ಬರವಣಿಗೆ ಅಥವಾ ಇನ್ನ್ಯಾವುದಾದರೂ ಪ್ರವೃತ್ತಿಗಳು stress buster ತರಹ ಪಾತ್ರ ವಹಿಸುತ್ತವೆ. ಬರವಣಿಗೆ ಮತ್ತು ಆಫೀಸ್ ಕೆಲಸ ಇವೆರಡನ್ನು ನಾನೆಂದೂ ಮಿಶ್ರ ಮಾಡಿಲ್ಲ. IT ಬದುಕಿನ ಕೆಲವೊಂದು ಅನುಭವಗಳನ್ನು ಬರವಣಿಗೆಗಳಲ್ಲಿ, ಕಂಪನಿಯ conflict of interest ಗೆ ಧಕ್ಕೆಯಾಗದಂತೆ ಬಳಸಿಕೊಂಡಿದ್ದೇನೆ.

        “ಸಮಯ ಎಲ್ಲಿದೆ?” ಎಂಬುದು ಒಂದು ವಸ್ತುನಿಷ್ಠ  ಪ್ರಶ್ನೆ. ಜೀವನದಲ್ಲಿ ನಿಮಗೆ ಏನಾದರೂ ಇಷ್ಟವಿದ್ದರೆ, ಅದಕ್ಕೆ ಸಮಯ ತನ್ನಿಂದ ತಾನೇ ದೊರಕುತ್ತದೆ. ಅದು ಬರವಣಿಗೆ ಇರಲಿ, ಚಿತ್ರಕಲೆ ಇರಲಿ, ಸಂಗೀತ ಇರಲಿ ಅಥವಾ ನೀವು ಪ್ರೀತಿಸುವ ವ್ಯಕ್ತಿಯೇ ಇರಲಿ. ನೀವು ದಿನಕ್ಕೆ ಆರು ಗಂಟೆಗಳಿಗಿಂತ ಹೆಚ್ಚು ಮಲಗುವವರಾದರೆ, ನಿಮ್ಮ ನಿದ್ರೆಯು ಅಷ್ಟು ಹೆಚ್ಚು ಸಮಯ ಕಬಳಿಸುತ್ತದೆ ಅಂತ ಅರ್ಥ. ನಿದ್ರೆಗೆಂದು ವ್ಯರ್ಥ ಮಾಡುವ ಹೆಚ್ಚುವರಿ ಸಮಯವನ್ನು ನಿಮ್ಮ ಪ್ರವೃತ್ತಿಯನ್ನು ಬೆಳೆಸಲು ತೊಡಗಿಸಿ. ತೊಡಗಿಸುವ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿ. ನಾನು ಬೆಳಿಗ್ಗೆಯ ಹೊತ್ತು 5 ರಿಂದ 6-30ರ ಅವಧಿಯಲ್ಲಿ ಬರೆಯುತ್ತೇನೆ. ಈ ಅವಧಿಯಲ್ಲಿ ಬಾಧೆಗಳು ಕಡಿಮೆ ಮತ್ತು ಮೆದುಳಿನ ಗ್ರಾಹಕ ಶಕ್ತಿ ಹೆಚ್ಚು ಎಂಬ ಕಾರಣಕ್ಕೆ. ಇನ್ನುಳಿದಂತೆ ವಾರಾಂತ್ಯಗಳಲ್ಲಿ ಮಕ್ಕಳನ್ನು ಅನೇಕ ಕ್ಲಾಸ್ ಗಳಿಗೆ ಕೊಂಡೊಯ್ಯುವುದು, ಅಲ್ಲಿ ಕಾಯುವ ಸಮಯದಲ್ಲಿ ಅದನ್ನು ಸದುಪಯೋಗ ಪಡಿಸಿ ಅಲ್ಲಿಯೂ ಲ್ಯಾಪ್ಟಾಪ್ ತೆರೆದು ಒಂದಿಷ್ಟು ಬರೆಯುತ್ತೇನೆ. ಇನ್ನು ಮುಂದೊಂದು ದಿನ ಬೆಂಗಳೂರಿನ ಟ್ರಾಫಿಕ್ನಲ್ಲಿ ಕೂಡಾ ಬರೆಯಬಹುದೇನೋ? ಒಟ್ಟಿನಲ್ಲಿ ನಿಮ್ಮ ಪ್ರಕಾರ ನಿಮಗೆ ಸಮಯದ ಅಭಾವದಿಂದ ಯಾವ ಕೆಲಸ ಮಾಡಲಾಗಲಿಲ್ಲವೋ, ಆ ಕೆಲಸ ನಿಮ್ಮ ಆದ್ಯತೆಯಲ್ಲಿಲ್ಲ ಎಂಬ ಅರ್ಥವನ್ನೇ ಸಾರುತ್ತದೆ. ಮೊದಲು ನಿಮ್ಮ ಆದ್ಯತೆಗಳನ್ನು ಸರಿಪಡಿಸಿಕೊಳ್ಳಿ, ಅದಕ್ಕೆ ಸಮಯ ಸ್ವಾಭಾವಿಕವಾಗಿಯೇ ಬರುತ್ತದೆ ನೋಡಿ. ಇದಲ್ಲದೇ ನಾನು ಸಮಯ ಉಳಿಸಲು ಗೊತ್ತು-ಗುರಿಯಿಲ್ಲದೆ ರೆಸ್ಟೋರೆಂಟ್-ಬಾರ್-ಪಬ್ ಗಳಲ್ಲಿ ಸಮಯ ಕಳೆಯುವುದಿಲ್ಲ, ಅವು ನನ್ನ ಆದ್ಯತೆಗಳಲ್ಲಿ ಇಲ್ಲ. ಇತ್ತೀಚಿಗೆ ಬಾರ್-ಪಬ್ ಗಳಿಗೆ socializing ಎಂಬ ಮೊಂಡು ನೆಪ ಹಾಕಿ ಕಾಲ ಕಳೆಯುವುದು ಅನೇಕರಿಗೆ ರೂಡಿಯಾಗಿದೆ. ಅದು ಅವರವರ ಆದ್ಯತೆ, ಬೇರೆ ರೀತಿಯಲ್ಲಿ socializing ಮಾಡಬಹುದು ಎಂದು ನನ್ನ ಅಭಿಪ್ರಾಯ. ಒಟ್ಟಿನಲ್ಲಿ ನಿಮಗೆ ಯಾವ ವಿಷಯ ಮುಖ್ಯವೋ ಅದಕ್ಕೆ ನೀವು ಸಮಯ ಮಾಡಿಕೊಂಡು ಮುಂದುವರೆಯುತ್ತೀರಿ. “ಸಮಯ ಎಲ್ಲಿದೆ?” ಎಂಬ ಪ್ರಶ್ನೆಗೆ ಉತ್ತರ ಅಲ್ಲೇ ಇದೆ!

 ಪುಸ್ತಕಗಳನ್ನು ಕೊಳ್ಳಲು  http://vittalshenoy.com/books

 

Tags: ತಾಳಿಕೋಟೆಯ ಕದನದಲ್ಲಿ